Oplus_0

ಮೇ 9 ರಂದು ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ | ಯಾದಗಿರಿ ಜಿಲ್ಲೆಯಾಗಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲಲಿದೆ; ಡಾ. ಶರಣಭೂಪಾಲರೆಡ್ಡಿ

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಯಾದಗಿರಿಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲುತ್ತದೆ. ದಶಕಗಳ ಕಾಲದ ಜನರ ಬೇಡಿಕೆಯನ್ನು ಅರಿತು, 2009ರಲ್ಲಿ ಕಲಬುರಗಿ ಜಿಲ್ಲೆಯಿಂದ ಯಾದಗಿರಿಯನ್ನು ವಿಭಜಿಸಿ ಕರ್ನಾಟಕದ 30ನೇ ಜಿಲ್ಲೆಯನ್ನಾಗಿ ಮಾಡಿದ ಸಾಹಸ  ಯಡಿಯೂರಪ್ಪನವರದ್ದಾಗಿದೆ, ಎಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎರಡು ಬಾರಿ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯನಾಗಿ ನೀಡಿದ ಜವಾಬ್ದಾರಿಗಳನ್ನು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ ಮತ್ತು ಪಕ್ಷದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಮುಂದಿನ ದಿನಮಾನಗಳಲ್ಲಿ ನಗರಸಭೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಯಾದಗಿರಿ ನಗರದ ಮುಖ್ಯ ರಸ್ತೆಯೊಂದಕ್ಕೆ ಯಡಿಯೂರಪ್ಪನವರ ರಸ್ತೆ ಎಂದು ಹೆಸರನ್ನು ಇಡಲು ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.

ದೂರದ ಕಲಬುರಗಿಗೆ ಅಲೆಯುತ್ತಿದ್ದ ಈ ಭಾಗದ ಜನರಿಗೆ ಆಡಳಿತವನ್ನು ಹತ್ತಿರವಾಗಿಸಿ, ಕಂದಾಯ ಮತ್ತು ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯಲು ಈ ನಿರ್ಧಾರ ಕಾರಣವಾಯಿತು. ಜಿಲ್ಲೆಯಾದ ನಂತರ ಯಾದಗಿರಿಯಲ್ಲಿ ಮೂಲಸೌಕರ್ಯ, ಜಿಲ್ಲಾ ಕೇಂದ್ರದ ಸಂಕೀರ್ಣಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿ, ಇದು ಈ ಭಾಗದ ಜನರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ನಾಂದಿ ಹಾಡಿದರು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವವಿಲ್ಲದ ಕಾಲಘಟ್ಟದಲ್ಲಿ, ಸೈಕಲ್ ಏರಿ ಹಳ್ಳಿ-ಹಳ್ಳಿಗಳನ್ನು ಸುತ್ತಿ ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ಶಕ್ತಿ. ರೈತ ಸುಖವಾಗಿದ್ದರೆ ದೇಶ ಸುಭಿಕ್ಷ ಎನ್ನುವ ಮಾತಿಗೆ ಜೀವ ನೀಡಿದವರು. ಅನ್ನದಾತನ ಬದುಕಿಗೆ ಹೊಸ ಆಯಾಮ ನೀಡಿ ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ‘ಪ್ರತ್ಯೇಕ ಕೃಷಿ ಬಜೆಟ್’ ಮಂಡಿಸಿ, ಕೃಷಿ ಕ್ಷೇತ್ರಕ್ಕೆ ರಾಜಗೌರವ ತಂದುಕೊಟ್ಟ ರೈತಬಂಧು. ರೈತನೊಬ್ಬ ಆರ್ಥಿಕವಾಗಿ ಸಶಕ್ತನಾಗಬೇಕೆಂಬ ಹಂಬಲದಿಂದ ಸಾಲ ಮನ್ನಾ ಮಾಡಿ, ಕೋಟ್ಯಂತರ ಕುಟುಂಬಗಳ ಪಾಲಿನ ಸಂಜೀವಿ. ಬಗರ್ ಹುಕುಂ ಸಾಗುವಳಿದಾರರ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಮತ್ತು ರೈತ ಸಮುದಾಯದ ಪರವಾಗಿ ಸದಾ ಧ್ವನಿ ಎತ್ತಿದ ಅವರ ಕಾಳಜಿ ಇಂದಿಗೂ ನಮಗೆಲ್ಲ ಪ್ರೇರಣೆ. ಅಧಿಕಾರಕ್ಕೋಸ್ಕರ ಅಲ್ಲ, ರೈತರ ಉದ್ಧಾರಕ್ಕಾಗಿ ಶ್ರಮಿಸಿದ ರೈತಬಂಧು ನಮ್ಮ ಬಿಎಸ್‌ವೈ ಎಂದು ಬಣ್ಣಿಸಿದರು.

ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ನಮ್ಮ ಬಿಎಸ್‌ವೈ ಅವರಿಗೆ ಸಲ್ಲುತ್ತದೆ. ಐದು ದಶಕಗಳಿಂದಲೂ ಅವಿರತವಾಗಿ ಜನಸೇವೆ ಸಲ್ಲಿಸುತ್ತಾ, ಸಂಘಟನೆಯೇ ಉಸಿರೆಂದು ಬದುಕುತ್ತಿರುವ ಕರ್ನಾಟಕ ಬಿಜೆಪಿಯ ಭೀಷ್ಮ, ದಣಿವರಿಯದ ಧೀಮಂತ ಜನನಾಯಕನ 50 ವರ್ಷಗಳ ಸುದೀರ್ಘ ಹಾಗೂ ಸಾರ್ಥಕ ರಾಜಕೀಯ ಜನಸೇವೆಯ ಅಂಗವಾಗಿ, ಮೇ 9 ರಂದು ಕೋಟೆನಾಡು ಚಿತ್ರದುರ್ಗದಲ್ಲಿ ಅಭೂತಪೂರ್ವ “ಬಿಎಸ್‌ವೈ ಅಭಿಮಾನೋತ್ಸವ” ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಯಡಿಯೂರಪ್ಪನವರ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಜನನಾಯಕನ ಅಭಿಮಾನೋತ್ಸವಕ್ಕೆ ಯಾದಗಿರಿ ಮತಕ್ಷೇತ್ರದಿಂದ ಸಾವಿರಕ್ಕಿಂತಲೂ ಹೆಚ್ಚು ಪಕ್ಷದ ಕಾರ್ಯಕರ್ತರು, ಹಿರಿಯ ಮುಖಂಡರು, ಅಭಿಮಾನಿಗಳು, ಸಾರ್ವಜನಿಕರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಗೌಡ ಖ್ಯಾತನಾಳ, ಮಾಜಿ ತಾಲೂಕು ಪಂಚಾಯತ ಸದಸ್ಯ ಶರಣಭೂಪಾಲರೆಡ್ಡಿ ಗುರುಸುಣಗಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಮಹಿಳಾ ಮೋರ್ಚಾ ರಾಜ್ಯ ರಾಜಕಾರಣಿ ಸದಸ್ಯ ವೀಣಾ ಮೋದಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌಹಾಣ್, ಮಾಜಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಭೀಮರೆಡ್ಡಿಗೌಡ ಚಟ್ನಳ್ಳಿ, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರಾದ ಮಲ್ಲನಗೌಡ ಬಿಳ್ಹಾರ, ಶಿವರಾಜ ಪಾಟೀಲ್, ಸಹ ಸಂಚಾಲಕ ಉದಯ ರಾಯಕೋಟಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರ, ಜಿಲ್ಲಾ ಬಿಜೆಪಿ ಸಹ ಸಂಚಾಲಕ ಚಂದ್ರಶೇಖರ್ ಕಡೆಸೂರ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲು ಕೋಲಿವಾಡ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!