ರೈತರ ಮೇಲೆ ದರ್ಪ ಮೆರೆದ ಗೊಲ್ಲಾಳೇಶ್ವರ ಆಗ್ರೋ ಮಾಲೀಕರು | ಆಗ್ರೋಗೆ ಬೀಗ ಜಡಿದು ರೈತ ಸಂಘದಿಂದ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್

ಅಫಜಲಪುರ: ಅನ್ನದಾತ ರೈತರನ್ನು ಅವಮಾನಿಸಿ, ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಗೊಲ್ಲಾಳೇಶ್ವರ ಆಗ್ರೋ ಏಜೆನ್ಸಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆಗ್ರೋ ಸಂಸ್ಥೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮಹಾಂತೇಶ್ ಜಮಾದಾರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಆಗ್ರೋ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ರೈತರನ್ನು ಗ್ರಾಹಕರಂತೆ ಅಲ್ಲ, ಗುಲಾಮರಂತೆ ಕಾಣುವ ಮನೋಭಾವವನ್ನು ಸಹಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಘಟನಾ ಸ್ಥಳದಲ್ಲಿ ರೈತರು ಹಾಗೂ ಆಗ್ರೋ ಮಾಲೀಕರ ನಡುವೆ ತೀವ್ರ ವಾಗ್ವಾದ ನಡೆಯಿತು. ರೈತರ ಮೇಲೆ ಹಲ್ಲೆ ನಡೆಸಿ, ಅವಮಾನ ಮಾಡಿದ ಆರೋಪಕ್ಕೆ ಆಗ್ರೋ ಮಾಲೀಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸಂಘಟನೆಯ ಕಾರ್ಯಕರ್ತರು ಪಟ್ಟು ಹಿಡಿದರು. ಕ್ಷಮೆ ಕೇಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತರು ಘೋಷಿಸಿದರು.

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ರೈತರ ಅಸಮಾಧಾನವನ್ನು ಆಲಿಸಿದ ಅಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಮಹಾಂತೇಶ್ ಜಮಾದಾರ, ರೈತರ ದುಡಿಮೆಯಿಂದ ಬದುಕುತ್ತಿರುವ ಕೆಲ ಆಗ್ರೋ ಮಾಲೀಕರು ಇಂದು ರೈತರ ಮೇಲೆಯೇ ದರ್ಪ ತೋರುತ್ತಿದ್ದಾರೆ. ರೈತರನ್ನು ಅವಮಾನಿಸುವ, ಹಲ್ಲೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೃಷಿಕ್ ಸಮಾಜದ ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡರು, ರೈತರ ಮೇಲಿನ ದೌರ್ಜನ್ಯ ಹಾಗೂ ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದರು. ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಎಸ್ ಎಚ್ ಗಡಗಿಮನಿ ರೈತರ ಮೇಲೆ ಹಲ್ಲೆ ನಡೆದರೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಗ್ರೋ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಹಾಗೂ ಸರ್ಕಾರದ ನಿಗದಿತ ಬೆಲೆಗೆ ಮಾತ್ರ ರಸಗೊಬ್ಬರ ಮಾರಾಟ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಳೆಂದ್ರ ಡಾಂಗೆ, ತಹಸೀಲ್ದಾರ್ ಸಂಜೀವಕುಮಾರ ದಾಸರ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!