ಅಳ್ಳೋಳ್ಳಿ ಗ್ರಾಮದಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ, ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಆಯೋಜನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಿಶ್ರ ತಳಿ ಕರುಗಳ ಪ್ರದರ್ಶನ ಕಾರ್ಯಕ್ರಮವನ್ನು ಗದ್ದಗಿ ಮಠದ ಶ್ರೀ ಶಿರಸಪ್ಪಯ್ಯ ಸ್ವಾಮಿ ಕರುವಿಗೆ ಪೂಜೆ ಮಾಡಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಸದರಿ ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಕರುಗಳು ಭಾಗವಹಿಸಿದ್ದವು. ರೈತ ಬಾಂಧವರು ಅತಿ ಉಸ್ತಾಹದಿಂದ ತಮ್ಮ ಕರುಗಳನ್ನು ಸಿಂಗಾರ ಮಾಡಿಕೊಂಡು ಪ್ರದರ್ಶನದಲ್ಲಿ ತಂದಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಕರಗಳಿಗೆ ಜಂತು ನಾಶಕ ಔಷಧಿ ಕುಡಿಸಿ, ಪೌಷ್ಟಿಕ ಆಹಾರ, ಸಾಲ್ಟ್ ಲಿಕ್, ಲವಣ ಮಿಶ್ರಣ ನೀಡಲಾಯಿತು.
ಪಶುವೈದ್ಯರ ತಂಡದವರು ವಿವಿಧ ತಳಿಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಆಯ್ಕೆ ಮಾಡಿ, ಬಹುಮಾನಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಜಲಯ್ಯ ಗುತ್ತೇದಾರ ಮತ್ತು ಗ್ರಾಮದ ಮುಖಂಡರಿಂದ ಜಾನುವಾರು ಮಾಲೀಕರಿಗೆ ನೀಡಲಾಯಿತು.
ಚಿತ್ತಾಪುರ ಪಶು ಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಂಕರ ಕಣ್ಣಿ ರವರು ಕರುಗಳ ಸಾಕಾಣಿಕೆ ಮತ್ತು ಪಾಲನೆ ಪೋಷಣೆ ಹಾಗೂ ಮಹತ್ವ ಕುರಿತು ಮಾಹಿತಿ ನೀಡಿದರು.
ಗ್ರಾಮಸ್ಥರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ತರಹದ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ಮಾಡಬೇಕೆಂದು ಕೋರಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಅಂಜಲಯ್ಯ ಗುತ್ತೇದಾರ, ಪಶು ವೈದ್ಯಧಿಕಾರಿ ಡಾ.ಆಕಾಶ, ಡಾ. ಹಿರಿಯ ಪಶುವೈದ್ಯಧಿಕಾರಿ ಮಂಜುನಾಥ್, ಪಶು ವೈದ್ಯಧಿಕಾರಿ ಡಾ. ಜ್ಯೋತಿ, ಮುಖಂಡರಾದ ಶಾಂತಣ್ಣ ಚಾಳೀಕಾರ, ದೇವಿಂದ್ರ ಹಾದಿಮನಿ ಸೇರಿದಂತೆ ಗ್ರಾಮದ ಮುಖಂಡರು, ರೈತ ಬಾಂಧವರು ಹಾಗೂ ಪಶುಪಾಲನ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.