ಬೆಂಗಳೂರಿನ ಟ್ರಾಫಿಕ್ ನಿರ್ವಹಣೆಯಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಭೆ

ನಾಗಾವಿ ಎಕ್ಸಪ್ರೆಸ್ 

ಬೆಂಗಳೂರು: ಟ್ರಾಫಿಕ್ ನಿರ್ವಹಣೆಯಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿದರು.

ಜಾಗತಿಕ ಮಟ್ಟದಲ್ಲಿ ಟೆಕ್ನಾಲಜಿ ಹಬ್ ಎಂದು ಗುರುತಿಸಿಕೊಂಡಿರುವ ಬೆಂಗಳೂರು ಸರ್ವ ರೀತಿಯಲ್ಲೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಜಾಗತಿಕ ಕಂಪೆನಿಗಳು ಬೆಂಗಳೂರನ್ನು ತಮ್ಮ ಆದ್ಯತೆಯ ಆಯ್ಕೆಯಾಗಿ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮತ್ತು ಬೆಂಗಳೂರಿನ ಬಹು ಆಯಾಮದ ಬೆಳವಣಿಗೆಯಲ್ಲಿ ವಾಹನ ದಟ್ಟಣೆಯ ಬೆಳವಣಿಗೆಯೂ ಒಂದು. ಬೇರೆಲ್ಲ ವಲಯದ ಬೆಳವಣಿಗೆಯು ಹೆಮ್ಮೆಪಡುವಂತಿದ್ದರೆ, ವಾಹನ ದಟ್ಟಣೆಯ ಬೆಳವಣಿಗೆ ಆತಂಕಪಡುವಂತಹದ್ದು. ಟ್ರಾಫಿಕ್ ಸಮಸ್ಯೆಯ ಮೂಲಭೂತ ಕಾರಣಗಳನ್ನು ಗುರುತಿಸುವುದರೊಂದಿಗೆ ಕಾಲಕಾಲಕ್ಕೆ ಸುಧಾರಣಾ ಕ್ರಮಗಳ ಉನ್ನತಿಕರಣವೂ ಅತ್ಯಗತ್ಯ ಎಂದರು.

ದೇಶದ ಇತರ ನಗರಗಳಲ್ಲಿನ ಟ್ರಾಫಿಕ್ ನಿರ್ವಹಣೆಯ ಮಾದರಿಗಳನ್ನು ಅಧ್ಯಯನ ಮಾಡುವುದರೊಂದಿಗೆ, ಇತರ ದೇಶಗಳಲ್ಲಿನ ಟ್ರಾಫಿಕ್ ನಿರ್ವಹಣೆಯ ಮಾದರಿಗಳನ್ನೂ ಸಹ ಅಧ್ಯಯನ ನಡೆಸಿ ಅಳವಡಿಸಿಕೊಳ್ಳುವ ಕುರಿತು ಸಭೆಯಲ್ಲಿ ಚಿಂತನೆ ನಡೆಸಲಾಯಿತು.

“ಅರ್ಬನ್ ಮೊಬಿಲಿಟಿ ಮಿಷನ್” ಅನುಷ್ಠಾನದ ಕುರಿತು ಕ್ರಮ ವಹಿಸಬೇಕು, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಹೆಚ್ಚಿನ ಆರ್ಥಿಕ ಚಟುವಟಿಕೆ ನಡೆಯುವ ಪ್ರದೇಶಗಳಲ್ಲಿ ಮತ್ತು ಹೆಚ್ಚಿನ ಉದ್ಯೋಗ ಸೃಜನೆಯಾಗುವ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ, ಈ ಪ್ರದೇಶಗಳ ಸಂಚಾರ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ರಸ್ತೆ ಮದ್ಯದಲ್ಲಿನ ವಿದ್ಯುತ್ ಕಂಬಗಳು ಹಾಗೂ ಇನ್ನಿತರ ಅಡಚಣೆಗಳ ನಿವಾರಣೆಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ಸಾರಿಗೆ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಟ್ರಾಫಿಕ್ ಸಮಸ್ಯೆಯ ಸುಧಾರಣೆಗೆ ಅಗತ್ಯವಿರುವ ಯಾವುದೇ ಇಲಾಖೆಗಳೊಂದಿಗೆ ಸಮನ್ವಯತೆ ಮತ್ತು ಸಹಕಾರದೊಂದಿಗೆ ಕೆಲಸ ಮಾಡಬೇಕು.

ಈ ಮೇಲಿನ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮಗಳಿಗೆ ಸೂಚಿಸಲಾಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!