Oplus_0

ಭೀಮಣ್ಣ ಸಾಲಿ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಕೋಲಿ ಸಮಾಜ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ತಿಪ್ಪಣ್ಣಪ್ಪ ಕಮಕನೂರ ಅವರ ಖಾಲಿಯಾಗಿರುವ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಭೀಮಣ್ಣ ಸಾಲಿ ಅವರಿಗೆ ಅವಕಾಶ ನೀಡಿ ನಾಮನಿರ್ದೇಶನ ಮಾಡಬೇಕು ಎಂದು ತಾಲೂಕು ಕೋಲಿ ಸಮಾಜದ ಮುಖಂಡರು ಒತ್ತಾಯಿಸಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಕೋಲಿ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ಬಸವರಾಜ ಚಿನ್ನಮಳ್ಳಿ, ಭೀಮಣ್ಣ ಸಾಲಿ ಅವರು ಕಳೆದ 1976 ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ಪಕ್ಷದ ಸಂಘಟನೆಗೆ ತಮ್ಮ ಜೀವನ ಮೂಡಿಪಾಗಿಟ್ಟು ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷದ ಸದಸ್ಯರಾಗಿ, ತಾಲೂಕು ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಕೆಲಸ ಮಾಡಿದ್ದಾರೆ. ಕಳೆದ 2009 ರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ವರಿಷ್ಟರು ಸಾಲಿ ಅವರ ಸೇವೆಯನ್ನು ಪರಿಗಣಿಸಿ ವಿಧಾನ ಪರಿಷತ್ತಿಗೆ ಅವಕಾಶ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದರು.

ಕೋಲಿ ಸಮಾಜದ ಹಿರಿಯ ಮುಖಂಡ ಹಣಮಂತ ಸಂಕನೂರ ಮಾತನಾಡಿ, ಕಳೆದ 50 ವರ್ಷಗಳಿಂದ ನಿರಂತರವಾಗಿ ಇಂದಿಗೂ ಕಾಂಗ್ರೆಸ್ ಪಕ್ಷದ ರಾಜಕಾರಣ ಬಿಟ್ಟರೆ ಸಾಲಿ ಅವರಿಗೆ ಬೇರೇನೂ ಗೊತ್ತಿಲ್ಲ. 1978 ರಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆ ಶುರು ಮಾಡಿದ್ದಾರೆ. ನಂತರ ಮಂಡಲ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸಾರ್ವಜನಿಕ ಸೇವೆ ಮಾಡಿ ರಾಜಕೀಯ ಕ್ಷೇತ್ರದಲ್ಲಿ ಜನಪ್ರಿಯತೆ ತಮ್ಮದಾಗಿಸಿಕೊಂಡಿದ್ದಾರೆ. ರಾಜಕೀಯವಾಗಿ ಅಪಾರ ಅನುಭವ ಹೊಂದಿರುವ ಸಾಲಿ ಅವರಿಗೆ ಅವರ ಪಕ್ಷ ನಿಷ್ಠೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಯಲ್ಲಮ್ಮ ದೇವಿ ದೇವಸ್ಥಾನದ ಸಮಿತಿ ಸದಸ್ಯರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾಗಿ, ನಗರ ಆಶ್ರಯ ಸಮಿತಿ ಸದಸ್ಯರಾಗಿ, ಕೇಂದ್ರ ಸರ್ಕಾರದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 21 ತಿಂಗಳ ಕಾಲ ಕೆ.ಕೆಆರ್’ಟಿಸಿ ನಿಗಮದ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆ ಪ್ರಾಮಾಣಿಕವಾಗಿ ಮಾಡಿದ್ದಾರೆ. ರಾಜಕೀಯವಾಗಿ ಅಪಾರ ಅನುಭವ ಮತ್ತು ಜನಪ್ರಿಯತೆ ಗಳಿಸಿರುವ ಸಾಲಿ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕು ಗೌರವಾಧ್ಯಕ್ಷ ರಾಮಲಿಂಗ ಬಾನರ್ ಮಾತನಾಡಿ, ಚಿತ್ತಾಪುರ ತಾಲೂಕಿಗೆ ವಿಧಾನ ಪರಿಷತ್ತಿನಲ್ಲಿ ಅವಕಾಶವೇ ಸಿಕ್ಕಿಲ್ಲ. ನೆರೆಯ ಕಾಳಗಿ ತಾಲೂಕಿನ ಹಿಂದುಳಿದ ಇಬ್ಬರಿಗೆ ಅವಕಾಶ ಸಿಕ್ಕಿದೆ. ಈ ಸಲ ಹಿಂದುಳಿದ ಸಮಾಜವಾದ ಕೋಲಿ ಸಮಾಜ ಹಿರಿಯ ಮುಖಂಡರು, ಎಲ್ಲಾ ಧರ್ಮ, ಎಲ್ಲಾ ಜಾತಿ ಜನಾಂಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ, ಎಲ್ಲರ ಪ್ರೀತಿ, ವಿಶ್ವಾಸ, ನಂಬಿಕೆಗೆ ಪಾತ್ರರಾಗಿರುವ ಭೀಮಣ್ಣ ಸಾಲಿ ಅವರಿಗೆ ಕಮಕನೂರ ಅವರ ಖಾಲಿ ಸ್ಥಾನಕ್ಕೆ ಅವಕಾಶ ನೀಡುವ ಮೂಲಕ ತಾಲೂಕಿನ ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಮಾತನಾಡಿ, ಚಿತ್ತಾಪುರ ವಿಧಾನ ಸಭೆ ಮತಕ್ಷೇತ್ರದಲ್ಲಿ ನಡೆದಿರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹೆಚ್ಚಿನ ಮತಗಳು ಬಂದು ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಸರಳ, ಸಜ್ಜನಿಕ ವ್ಯಕ್ತಿತ್ವದಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಾಜಕೀಯವಾಗಿ ತಮ್ಮ ಛಾಪು ಮೂಡಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ವಿರೋಧ ಪಕ್ಷದವರು ಮೆಚ್ಚುವಂತೆ ರಾಜಕೀಯ ಮಾಡಿ ಅಜಾತ ಶತ್ರುವಾಗಿದ್ದಾರೆ. ಇದೆಲ್ಲವನ್ನು ಪಕ್ಷದ ವರಿಷ್ಕರು ಪರಿಗಣಿಸಿ ಸಾಲಿ ಅವರಿಗೆ ಈ ಸಲದ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶ ನೀಡಲೇಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಕಾಂಗ್ರೆಸ್ ಯುವ ಅಧ್ಯಕ್ಷ ದೇವಿಂದ್ರ ಯಾಬಾಳ, ಮುಖಂಡರಾದ ಶರಣಪ್ಪ ನಾಶಿ, ರಾಜೇಂದ್ರಪ್ಪ ಅರಣಕಲ್, ಭೀಮರಾಯ ಹೊತಿನಮಡಿ, ಇಂದುಶೇಖರ ಬೆಂಕಿ, ಮುನಿಯಪ್ಪ ಕೊಳ್ಳಿ, ನಾಗೇಂದ್ರ ಜೈಗಂಗಾ, ಶ್ರೀಶೈಲ್ ಇಂಗಳಗಿ, ಲಕ್ಷ್ಮೀಕಾಂತ ಸಾಲಿ, ಸಿದ್ದಣ್ಣ ನಾಲವಾರ, ವಿಶ್ವನಾಥ ಕುಂಬಾರ, ಶರಣು ಡೋಣಗಾಂವ, ಕರಣಕುಮಾರ ಅಲ್ಲೂರ, ಬಸವರಾಜ ಜಕಾತಿ, ಸಂತೋಷ ಮಳಬಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!