ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ, ಜನಾಭಿಪ್ರಾಯ ಮೂಡಿಸುವ ಮಾದ್ಯಮ ಪವಿತ್ರವಾದ ವೃತ್ತಿ: ಈಶ್ವರ ಖಂಡ್ರೆ
ನಾಗಾವಿ ಎಕ್ಸಪ್ರೆಸ್
ಬೀದರ್: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಜೊತೆಗೆ ಮಾಧ್ಯಮದ ಮೇಲೆಯೂ ಅಷ್ಟೇ ಜವಾಬ್ದಾರಿ ಇದ್ದು ಜನಾಭಿಪ್ರಾಯ ಮೂಡಿಸುವ ಮಾದ್ಯಮ ಪವಿತ್ರವಾದ ವೃತ್ತಿಯಾಗಿದೆ ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದ ಗುರುನಾನಕ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಖಡ್ಗಕ್ಕಿಂತ ಲೇಖನಿ ಹರಿತವಾದದ್ದು ಈ ಲೇಖನಿ ಜನರಿಗಾಗಿ, ಸಮಾಜದ ಸದ್ಗತಿಗಾಗಿ ಉಪಯೋಗ ಮಾಡಬೇಕಿದೆ ಎಂದರು.
ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ ಸೇರಿದಂತೆ ಹೊಸ ಹೊಸ ಆವಿಷ್ಕಾರಗಳು, ಬದಲಾವಣೆ ಆದರೂ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವ ಮತ್ತು ವಿಶ್ವಾಸಾರ್ಹತೆ ಇಟ್ಟುಕೊಂಡಿದೆ. ಸತ್ಯಾಸತ್ಯತೆ ಅರಿತುಕೊಂಡು ನಿಖರವಾಗಿ, ಸ್ವಷ್ಟವಾಗಿ ಸುದ್ದಿ ಮಾಡಬೇಕು, ಊಹಾಪೋಹ ಆಧಾರದ ಮೇಲೆ ಸುಳ್ಳು ಸುದ್ದಿ ಪ್ರಕಟಿಸಿದರೆ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಹಸಿರು ಹೊದಿಕೆ ಹಾಗೂ ಅರಣ್ಯ ಕ್ಷೇತ್ರ ಕಡಿಮೆಯಾಗುತ್ತದೆ ಮರಗಳು, ಪರಿಸರ ರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ. ಪರಿಸರ ಜಾಗೃತಿ ಮೂಡಿಸುವಲ್ಲಿ ಮಾದ್ಯಮಗಳು ತುಂಬಾ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಕಲ್ಯಾಣ ಕರ್ನಾಟಕದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು 50 ಕೋಟಿ ಅನುದಾನ ಮೀಸಲಿಡಲಾಗಿದೆ, ನಮ್ಮ ಸರ್ಕಾರ ಬಂದ ಮೇಲೆ ಇಲ್ಲಿವರೆಗೆ 11 ಕೋಟಿ ಸಸಿ ನೆಟ್ಟಿದ್ದೇವೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿ ನೀಡುವ ಸುದ್ದಿಗಳ ನಿಯಂತ್ರಣ ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿದರು. ಗುರುನಾನಕ್ ಎಂಜಿನಿಯರಿಂಗ್ ಕಾಲೇಜು ಹಾಗೂ ಶ್ರೀ ನಾನಕ್ ಝೀರಾ ಸಾಹಿಬ್ ಪ್ರತಿಷ್ಠಾನ ಅಧ್ಯಕ್ಷ ಡಾ. ಎಸ್. ಬಲ್ಲೀರ್ ಸಿಂಗ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ದಿಲೀಪ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ್ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೋಳ್ಳಿ, ಕಲಬುರಗಿ ನಿರ್ದೇಶಕ ಜಡಿಯಪ್ಪ, ಕೆ. ವೆಂಕಟೇಶ್, ಕೆ. ನಿಂಗಜ್ಜ, ಎಂ.ಎಸ್. ಅಹೋಬಳಪತಿ, ಸಂಗಮೇಶ್ ಚೂರಿ, ಶೋಭಾ ಎಂ.ಸಿ, ಅನಿಲ್ ವಿ. ಗೆಜ್ಜಿ, ಜೆ. ಅಬ್ಬಾಸ್ ಮುಲ್ಲಾ, ಹೆಚ್.ವಿ. ಕಿರಣ್, ಕೆಂಚೇಗೌಡ, ಯು. ಸುರೇಂದ್ರ ಶೆಣೈ, ರವಿ ಕೋಟಿ, ರಶ್ಮಿ ಎಸ್, ಪ್ರೊ. ಎನ್. ಮಮತ, ಪ್ರೊ. ಉಮೇಶ್ಚಂದ್ರ, ಡಾ. ಶಿವಕುಮಾರ್ ಕಣಸೋಗಿ ಸೇರಿದಂತೆ ಇತರರು ಇದ್ದರು.
ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಸ್ವಾಗತಿಸಿದರು, ಅಕಾಡೆಮಿ ಸದಸ್ಯೆ ಎಸ್. ರತ್ನ ನಿರೂಪಿಸಿದರು. ಬೀದರ್ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೋಳ್ಳಿ ವಂದಿಸಿದರು.

