ಚಿತ್ತಾಪುರ ಹಜರತ್ ಚಿತ್ತಾಷವಲಿ ದರ್ಗಾದ 798ನೇ ಉರುಸ್ ಮೇ.20 ರಿಂದ ಪ್ರಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಹಜರತ್ ಚಿತ್ತಾಷವಲಿ ದರ್ಗಾದ 798 ನೇ ಜಾತ್ರಾ ಮಹೋತ್ಸವ (ಉರುಸ್) ಇದೇ ಮೇ.20 ರಂದು ಪ್ರಾರಂಭವಾಗಿ ಮೂರು ದಿನಗಳವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದರ್ಗಾದ ಮುತ್ತುವಲಿ ಸೈಯದ್ ಮಿನಾಜೋದ್ದೀನ್ ಚಿಸ್ತಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ನಾಗಣ್ಣ ಬಳ್ಳಾ ಮನೆಯಲ್ಲಿ ಗಲಾಫ್ ಪಾತೆಹಾ (ಪ್ರಾರ್ಥನೆ) ಹಾಗೂ ಪ್ರಸಾದ ಕಾರ್ಯಕ್ರಮ ನಡೆಯುವುದು. ರಾತ್ರಿ 10 ಗಂಟೆಗೆ ದರ್ಗಾದ ಮುತ್ತುವಲಿ ಸೈಯದ್ ಮಿನಾಜೋದ್ದೀನ್ ಚಿಸ್ತಿ ಮನೆಯಲ್ಲಿ ಜುಲುಸ್ ಸಂದಲ್ ಶರೀಫ್ ಫಾತೇಹಾ ನಂತರ ಗಂಧದ ಮೆರವಣಿಗೆ ಇಲ್ಲಿಂದಲೇ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ದರ್ಗಾದವರೆಗೆ ಬಹು ವಿಜೃಂಭಣೆಯಿಂದ ಜರುಗುವುದು.
ಬೆಳಗಿನ ಜಾವ 5 ಗಂಟೆಗೆ ದರ್ಗಾದಲ್ಲಿ ಸೂಫಿ ಸಂತನ ಸಮಾದಿಗೆ ಗಂಧ ಸಮರ್ಪಣೆ ಕಾರ್ಯಕ್ರಮ ಮತ್ತು ಪಸಾದ ವಿತರಣೆ ನಡೆಯುವುದು. ಮೇ.21 ರಂದು ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ದೀಪೋತ್ಸವ ಕಾರ್ಯಕ್ರಮ ಹಾಗೂ ಗೀಗೀ ಪದಗಳ ಮತ್ತು ಖವ್ವಾಲಿ ಹಾಡುಗಾರಿಕೆ ನಡೆಯುವುದು. ಮೇ.22 ರಂದು ಬೆಳಗ್ಗೆ 6 ಗಂಟೆಗೆ ಖುರಾನ್ ಶರೀಫ್ ತಿಲಾವತ ಮತ್ತು ಫತೇಹಾ ಸೇರಿದಂತೆ ವಿವಿಧ ಜನಾಕರ್ಷಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ಸೇರಿದಂತೆ ನೆರೆಯ ಆಂಧ್ರಪ್ರದೇಶ, ಮುಂಬೈ, ಪುಣೆ ಸೇರಿದಂತೆ ಇನ್ನಿತರ ದೂರದ ಪ್ರದೇಶಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವರು ಎಂದು ತಿಳಿಸಿದ್ದಾರೆ.