ಚಿತ್ತಾಪುರ ಜ್ಞಾನ ವಿಕಾಸ ಕೇಂದ್ರ ಹೊಲಿಗೆ ತರಬೇತಿ ಉದ್ಘಾಟನೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ: ಅವಂಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಸ್ವಾವಲಂಬಿ ಜೀವನಕ್ಕೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ ಎಂದು ನ್ಯಾಯವಾದಿ ಚಂದ್ರಶೇಖರ ಅವಂಟಿ ಹೇಳಿದರು.
ಪಟ್ಟಣದ ಆಶ್ರಯ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಚಿತ್ತಾಪರ ತಾಲೂಕು ಪದ್ಮವಿಭೂಷಣ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಜ್ಞಾನ ವಿಕಾಸ ಕೇಂದ್ರ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಯಾಗಿ ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸದೃಢ ರಾಗಬೇಕು ಎಂಬುದೇ ಸಂಸ್ಥೆಯ ಗುರಿಯಾಗಿದೆ ಇದಕ್ಕಾಗಿಯೇ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇಮಿ ಗೌವರ್ನಮೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅವರು ಈ ಹಿಂದೆ ವೀರಶೈವ ಸಮಾಜದ ರುದ್ರಭೂಮಿ ಅಭಿವೃದ್ಧಿಗೆ 3 ಲಕ್ಷ ಅನುದಾನ ನೀಡಿದ್ದಾರೆ ಹೀಗಾಗಿ ಇವರ ಸಮಾಜಮುಖಿ, ಸೇವಾ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ ಮಹಿಳೆಯರ ಮೇಲೆ ಬಹಳ ಜವಾಬ್ದಾರಿ ಇದೆ, ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರು ಸ್ವಾವಲಂಬಿ ಜೀವನಕ್ಕೆ ಬೇಕಾದ ವಿವಿಧ ತರಬೇತಿಗಳು ಹಾಗೂ ಆರ್ಥಿಕ ಸಹಾಯ ನೀಡುತ್ತಿದ್ದಾರೆ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದರಿಂದ ದೇವಸ್ಥಾನದ ಹುಂಡಿ ತುಂಬಿದೆ ಹೀಗಾಗಿ ಮಹಿಳೆಯರ ಅಭಿವೃದ್ಧಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹ ಅನುಕೂಲ ಆಗಿದೆ ಎಂದರು.
ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರ ಪಾತ್ರ ಪ್ರಮುಖವಾಗಿದೆ, ಇವರು ಕೈಗೊಳ್ಳುತ್ತಿರುವ ಸೇವಾ ಕಾರ್ಯದಿಂದ ಮಹಿಳೆಯರು ಜಾಗೃತರಾಗಿದ್ದಾರೆ ಹಾಗೂ ಸಂಘಟಿತರಾಗಿದ್ದಾರೆ, ಹಣಕಾಸಿನ ವ್ಯವಹಾರ, ಸಾಲ ಸೌಲಭ್ಯ ಹಾಗೂ ಹಣ ಉಳಿತಾಯದ ಬಗ್ಗೆ ತಿಳಿದುಕೊಂಡಿದ್ದರಿಂದ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸದೃಢರಾಗಿದ್ದಾರೆ ಅನೇಕ ಜನ ಮಹಿಳೆಯರು ಸಾಲ ಸೌಲಭ್ಯದಿಂದ ಸಣ್ಣ ಪುಟ್ಟ ವ್ಯಾಪಾರ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಯಾದಗಿರಿ ಜಿಲ್ಲಾ ಯೋಜನಾ ನಿರ್ದೇಶಕ ಕಮಲಾಕ್ಷ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಕಳೆದ 40 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
340 ಅಶಕ್ತ ಮಹಿಳೆಯರಿಗೆ ಮಾಸಾಶನ ನೀಡಲಾಗಿದೆ, 25 ಅಶಕ್ತ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ ಈ ವರ್ಷ 9 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ, ಮಹಿಳಾ ಸ್ವಸಹಾಯ ಸಂಘಗಳ ಮಾಡಿ ಆರ್ಥಿಕ ನೆರವು ನೀಡಲಾಗುತ್ತಿದೆ, ಹಾಲು ಉತ್ಪಾದಕರ ಸಂಘಗಳಿಗೆ ಉತ್ತೇಜನ ಜೊತೆಗೆ ಮಹಿಳೆಯರ ಸ್ವಾವಲಂಬನೆ ಬದುಕಿಗಾಗಿ ಸ್ವ ಉದ್ಯೋಗ ದೊರಕಿಸಿ ಕೊಡಲು ಟೈಲರಿಂಗ್ ತರಬೇತಿ ನೀಡಲಾಗುತ್ತದೆ, ಕೆರೆ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ ಜೊತೆಗೆ ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ಅನೇಕ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮುಖ್ಯಶಿಕ್ಷಕಿ ಜಯಶ್ರೀ ಮಾತನಾಡಿ, ಸಂಘ ಸಂಸ್ಥೆಗಳ ಸಭೆಯಲ್ಲಿ ಮಹಿಳೆಯರು ಮೊದಲು ಭಾಗವಹಿಸಿ ಮಾಹಿತಿ ಪಡೆದು ಜಾಗೃತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಕಿವಿಮಾತು ಹೇಳಿದರು. ಮುಖಂಡ ರಾಜಶೇಖರ್ ಪಾಟೀಲ್ ಸಂಕನೂರ, ಸೇವಾ ಪ್ರತಿನಿಧಿ ತೇಜಸ್ವಿನಿ, ಟೈಲರಿಂಗ್ ತರಬೇತಿದಾರರು ಅಪ್ಸನಾಬೇಗಂ ಇದ್ದರು. ಮೇಲ್ವಿಚಾರಕಿ ನಂದಿನಿ ಸ್ವಾಗತಿಸಿದರು, ಸಮನ್ವಯಾಧಿಕಾರಿ ಅರ್ಚನಾ ನಿರೂಪಿಸಿದರು.