Oplus_0

ಚಿತ್ತಾಪುರ ಜಿಪಿಟಿ ಶಿಕ್ಷಕರ ಸಂಘ ರಚನೆ, ಅಧ್ಯಕ್ಷರಾಗಿ ಸಂಗಣ್ಣಗೌಡ ನಾಲವಾರ ಆಯ್ಕೆ | ಪದವೀಧರ ಶಿಕ್ಷಕರ ಹಿತಕ್ಕಾಗಿ ಹೋರಾಟಕ್ಕೆ ಸಿದ್ಧರಿರಬೇಕು: ಬಿರಾದಾರ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (GPT- Graduate Primary Teachers) 6 ರಿಂದ 8 ರ ಸಮುದಾಯದ ಶಿಕ್ಷಕರ ಹಿತಕ್ಕಾಗಿ, ಅವರ ಬೇಕು ಬೇಡಗಳ ಹಕ್ಕಿಗಾಗಿ ಹೋರಾಟ ಮಾಡಲು ಸಿದ್ಧರಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಹೇಳಿದರು.

ಪಟ್ಟಣದ ಬಿಆರ್’ಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ 2026-2031 ಅವಧಿಗಾಗಿ ಆಯ್ಕೆಯಾದ ನೂತನ ಚುನಾಯಿತ ಪದಾಧಿಕಾರಿಗಳು / ನಿರ್ದೇಶಕರುಗಳ ಪದಗ್ರಹಣ ಹಾಗೂ ಶಿಕ್ಷಕ/ಶಿಕ್ಷಕಿಯರಿಗೆ ಅಭಿನಂದನಾ ಸಮಾರಂಭದಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ಮೂಲ ಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಸಂಘ ರಚನೆಯಾದಾಗ ಹಲವಾರು ಸಮಸ್ಯೆಗಳು, ಸವಾಲುಗಳು ಎದುರಾಗುತ್ತವೆ ಆದರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಿದ್ಧರಿರಬೇಕು ಎಂದರು.

ಮೊದಲು ಇಲಾಖೆ ನಂತರ ಸಂಘ:

ಚುನಾವಣಾ ಪೂರ್ವದಲ್ಲಿ ಸ್ಪರ್ದೆ, ಚುನಾವಣೆಯಲ್ಲಿ ಗೆದ್ದ ನಂತರ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ತಮ್ಮ ಹಕ್ಕು ಮತ್ತು ಸೌಲಭ್ಯಗಳಿಗಾಗಿ ಹಾಗೂ ಗುರಿ ಉದ್ದೇಶಗಳ ಈಡೇರಿಕೆಗಾಗಿ ಇಲಾಖೆಯ ಹಾಗೂ ಸರ್ಕಾರದ ನಿಯಮಗಳಡಿ ಹೋರಾಟ ಮಾಡಬೇಕಾಗುತ್ತದೆ ಎಂದರು. ಮೊದಲು ಸರ್ಕಾರಿ ನೌಕರರರು ನಂತರ ಇಲಾಖೆ ನಂತರ ಸಂಘ ಬರಲಿದೆ, ಇಲಾಖೆ ಹೊರತುಪಡಿಸಿ ಸಂಘ ಇಲ್ಲ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸರ್ಕಾರದ ಹಾಗೂ ಇಲಾಖೆಯ ಇತಿಮಿತಿಯಲ್ಲಿ ಕೆಲಸ ಮಾಡಬೇಕು ಎಂದರು.

ಮಕ್ಕಳಿದ್ದರೆ ನಮ್ಮ ನಿಮ್ಮ ಅಸ್ತಿತ್ವ:

ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಕಾಯ್ದುಕೊಳ್ಳಬೇಕು, ಮಕ್ಕಳ ಸಂಖ್ಯೆ ಕಡಿಮೆ ಆದರೆ ಒಂದು ಹುದ್ದೆ ಕಡಿತವಾಗುತ್ತದೆ, ಹೀಗಾಗಿ ನಮ್ಮ ನಿಮ್ಮ ಅಸ್ತಿತ್ವ ಮಕ್ಕಳ ಮೇಲಿದೆ ಎಂದು ಹೇಳಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸದಿದ್ದರೆ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಸಂಖ್ಯೆ ಕಡಿಮೆಯಾಗಲಿದೆ ಆಗ ಭವಿಷ್ಯದಲ್ಲಿ ಸರ್ಕಾರಿ ನೌಕರಿ ಸಿಗಲು ಕಷ್ಟವಾಗಲಿದೆ ಹೀಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು. ಸಂಘವನ್ನು ವೈಯಕ್ತಿಕ ಹಿತಾಸಕ್ತಿಗಾಗಿ ದುರುಪಯೋಗ ಮಾಡಿಕೊಳ್ಳದೇ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.

ಸಂಘ ಬಲಿಷ್ಠ ಮಾಡುವುದಕ್ಕೆ ಪ್ರಯತ್ನ:

ನೂತನ ಅಧ್ಯಕ್ಷ ಸಂಗಣ್ಣಗೌಡ ನಾಲವಾರ ಮಾತನಾಡಿ, ಪದವೀಧರ ಶಿಕ್ಷಕರ ಅನೇಕ ಸಮಸ್ಯೆಗಳನ್ನು ಹಂತಹಂತವಾಗಿ ಕಾನೂನುಬದ್ಧವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸಂಘವನ್ನು ಬಲಿಷ್ಠ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಬಿಆರ್’ಸಿ ಆದಪ್ಪ ಸಜ್ಜನ್, ನಟರಾಜ್, ಗೀತಾ, ಸವಿತಾ, ಅಂಬಣ್ಣ ಅವರು ಮಾತನಾಡಿದರು.

ನೂತನ ಪದಾಧಿಕಾರಿಗಳಿಗೆ ಸನ್ಮಾನ:

ಸಂಗಣ್ಣಗೌಡ ನಾಲವಾರ (ಅಧ್ಯಕ್ಷರು) ಸಿದ್ದಣ್ಣ ಕಮರವಾಡಿ (ಪ್ರಧಾನ ಕಾರ್ಯದರ್ಶಿ), ಸುರೇಶ್ ಓಂಕಾರ್ (ಖಜಾಂಚಿ) ನಿರ್ದೇಶಕರಾದ ಅಮರನಾಥ, ಪವನಕುಮಾರ, ಸಂತೋಷ ಷಣ್ಮುಗ, ಇರ್ಫಾನ್, ಗೀತಾ, ದೀಪಿಕಾ, ಅಂಬಣ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೇವಿಂದ್ರರೆಡ್ಡಿ ದುಗನೂರ, ಕಸಾಪ ಅಧ್ಯಕ್ಷ ವೀರಭದ್ರಪ್ಪ ಗುರುಮಠಕಲ್, ದೇವಪ್ಪ ನಂದೂರಕರ್, ತಮ್ಮನ್ನಾ ಕೌಸರ್, ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಜಾಫರ್ ಬಿ.ಆರ್.ಪಿ, ಹಾಜಿ ಸಾಬ್ ಮುಲ್ಲಾ, ಜಗನ್ನಾಥ ಬಡಿಗೇರ ಹಿರಿಯ ಮುಖ್ಯ ಗುರುಗಳು, ವೀರಸಂಗಪ್ಪ ಸುಲೇಗಾಂವ, ಗುರುಲಿಂಗಪ್ಪ ದೊಡ್ಡಮನಿ, ಶ್ರೀಕಾಂತ ಮುಖ್ಯ ಗುರುಗಳು, ವಿಜಯಕುಮಾರ ಭಂಕಲಗಿ, ಗುಂಡಪ್ಪ, ಭೋರಮ್ಮ ಮರತೂರ, ಸುನೀಲ್, ಬಸವರಾಜ ಯಾಗಾಪೂರ, ಬಸವರಾಜ ಕಟ್ಟಿ ಸೇರಿದಂತೆ ಜಿಪಿಟಿ ಶಿಕ್ಷಕರು ಮತ್ತು ಕೆಲವು ಜನ ಅಥಿತಿ ಶಿಕ್ಷಕರು ಉಪಸ್ಥಿತರಿದ್ದರು. ಶಿಲ್ಪಾ ಹೊಸ್ಸುರ್ ಪ್ರಾರ್ಥಿಸಿದರು, ಖಜಾಂಚಿ ಸುರೇಶ್ ಓಂಕಾರ್ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!