ಚಿತ್ತಾಪುರ ಕೃಷಿಕ ಸಮಾಜದ ಪದಾಧಿಕಾರಿಗಳ ಸಭೆ, ಕೃಷಿಕ ಸಮಾಜದ ಪ್ರತಿ ಸದಸ್ಯರು ಸಾವಿರ ಗಿಡಗಳು ನೆಡಲು ದಂಗಾಪೂರ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೃಷಿಕ ಸಮಾಜದ ಪ್ರತಿಯೊಬ್ಬ ಸದಸ್ಯರು ಸಾವಿರ ಗಿಡಗಳು ನೆಡಬೇಕು ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪೂರ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಕೃಷಿಕ ಸಮಾಜದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗಿಡಮರಗಳು ಬೆಳೆಸಿದಾಗ ಉತ್ತಮ ಮಳೆ ಮತ್ತು ಬೆಳೆ ಆಗಲಿದೆ ಅದರಲ್ಲೂ ಉತ್ತಮ ಪರಿಸರ ನಿರ್ಮಾಣವಾಗಿ ಶುದ್ಧ ಗಾಳಿ ಸಿಗಲಿದೆ ಎಂದು ಹೇಳಿದರು.
ರೈತರಲ್ಲಿ ಬೆಳೆ ವಿಮೆ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಸದಸ್ಯರು ಕಾರ್ಯಪ್ರವೃತ್ತರಾಗಬೇಕು ಎಂದು ಕಿವಿಮಾತು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್ ಮಾತನಾಡಿ, ಕೃಷಿ ಇಲಾಖೆಯ ವತಿಯಿಂದ ಅಧಿಕ ಇಳುವರಿ ಪಡೆಯಲು ಲಘು ಪೋಷಕಾಂಶಗಳ ಬಳಕೆ, ಬೀಜೋಪಚಾರದ ಮಹತ್ವ, ಸಾವಯವ ಗೊಬ್ಬರಗಳ ಬಳಕೆ, ಹಾಗೂ ಇಲಾಖೆಯಿಂದ ವಿತರಣೆ ಯಾಗುವ ಹನಿ ನೀರಾವರಿ, ಲಘು ನೀರಾವರಿ ಘಟಕಗಳ ಬಗ್ಗೆ ಹಾಗೂ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಉಪಾಧ್ಯಕ್ಷ ಚನ್ನಬಸಪ್ಪ ಜೀವಣಗಿ, ಪ್ರಧಾನ ಕಾರ್ಯದರ್ಶಿ ನಿಂಗಣ್ಣಗೌಡ ಬಿರಾದಾರ, ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ, ಖಜಾಂಚಿ ನಿಂಗಣ್ಣ ಹೆಗಲೇರಿ, ಸದಸ್ಯರಾದ ಅಬ್ದುಲ್ ನಯಿಮ್ ಹಾಜಿ ಗಫುರಸಾಬ್, ರವೀಂದ್ರ ದೇವಿಂದ್ರಪ್ಪ, ಶಿವಶರಣ ರೆಡ್ಡಿ ಸಿದ್ದಾರೆಡ್ಡಿ, ಸುಭಾಶ್ಚಂದ್ರ ಚನ್ನಬಸಪ್ಪ, ಸತ್ಯನಾರಾಯಣ ಯಾದವ್, ಪಂಚಾಕ್ಷರಿ ಪೂಜಾರಿ, ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ, ತೋಟಗಾರಿಕೆ ಇಲಾಖೆಯ ಪ್ರದೀಪ್ ಕುಮಾರ್, ಅರಣ್ಯ ಇಲಾಖೆಯ ಮಹ್ಮದ್ ಜಾವೀದ್ ಇದ್ದರು.