ಚಿತ್ತಾಪುರ ಪಟ್ಟಣದ ಅಭಿವೃದ್ಧಿಗೆ ಬಿಜೆಪಿಯವರು ಅಡ್ಡಿಪಡಿಸುತ್ತಿರುವುದು ಖಂಡನೀಯ: ಮಲ್ಲಿಕಾರ್ಜುನ ಕಾಳಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಪುರಸಭೆಯ ಬಿಜೆಪಿ ಸದಸ್ಯರು ಹಾಗೂ ಮುಖಂಡರು ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಚಿತ್ತಾಪುರದಲ್ಲಿ ರವೀಂದ್ರ ಸಜ್ಜನಶೆಟ್ಟಿ ಅವರು ತಮ್ಮ ತಾಲೂಕು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಾಸಕ ಪ್ರಿಯಾಂಕ್ ಖರ್ಗೆ ಆಗ 2020 ರಲ್ಲಿ ಬಿಜೆಪಿ ಸರ್ಕಾರಕ್ಕೆ ಕೊಳಗೇರಿ ಮಂಡಳಿಯಡಿ ಮನೆಗಳಿಗಾಗಿ 12 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರು. ಆಗ ಬಿಜೆಪಿಯವರು ಬಾಯಿ ಬಿಡಲಿಲ್ಲ. ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುತುವರ್ಜಿಯಿಂದ ಕಾರ್ಯ ಪ್ರಗತಿಯಲ್ಲಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಚಿವರು ಫಲಾನುಭವಿಗಳಿಗೆ ಮನೆಗಳು ಹಂಚಿಕೆ ಮಾಡಲಿದ್ದಾರೆ ಎಂದು ಹೇಳಿದರು.
ಕೆನರಾ ಬ್ಯಾಂಕ್ ಎದುರು ಇರುವ ಪುರಸಭೆ ವಾಣಿಜ್ಯ ಮಳಿಗೆಗಳು, ತರಕಾರಿ ಮಾರುಕಟ್ಟೆ ಮಳಿಗೆ ಬಾಡಿಗೆ ಹಾಗೂ ಠೇವಣಿ ಹೆಚ್ಚಿದ್ದು ಜನರ ಅನುಕೂಲಕ್ಕೋಸ್ಕರ ಡಿಸಿ ಅವರಿಗೆ ಮನವರಿಕೆ ಮಾಡಿದ್ದೇವೆ ಈಗ ದರ ಕಡಿಮೆಗೊಳಿಸಿದ್ದಾರೆ. ಕಡತ ಅವರ ಹತ್ತಿರವೇ ಇದೆ ಅವರ ಆದೇಶದಂತೆ ಹರಾಜು ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಗುಲ್ಲೆಬ್ಬಿಸಿದ್ದಾರೆ ಆದರೆ ಅವರ ಪಕ್ಷವೇ ಒಡೆದ ಮನೆಯಂತೆ ಮನೆಯೊಂದು ಮೂರು ಬಾಗಿಲುಗಳಾಗಿವೆ ಎಂದು ಟೀಕಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ಕಾಶಿ ಮಾತನಾಡಿ, ನಮ್ಮ ವಾರ್ಡ್ ಪರಿಶಿಷ್ಟ ಜಾತಿಗೆ ಬರಲಿದೆ ಎಸ್.ಸಿ.ಪಿ.ಅನುದಾನದಲ್ಲಿ ನಿಯಮದ ಪ್ರಕಾರ ಸಿಸಿ ರಸ್ತೆ ಕಾಮಗಾರಿ ಗುಣಮಟ್ಟದಲ್ಲಿ ನಡೆದಿದೆ ಆದರೆ ಬಿಜೆಪಿಯ ಪುರಸಭೆ ಸದಸ್ಯರಿಗೆ ಹಾಗೂ ಮುಖಂಡರಿಗೆ ಪರಿಜ್ಞಾನ ಇಲ್ಲದೆ ವಿನಾಕಾರಣ ಇಲ್ಲಸಲ್ಲದ ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಯಾವುದೇ ತಾರತಮ್ಯ ಮಾಡದೆ ಎಲ್ಲಾ ವಾರ್ಡ್ ಗಳಿಗೆ ಅನುದಾನ ನೀಡಿದ್ದಾರೆ. ನಾವು ಅಭಿವೃದ್ಧಿ ಪರ ಇದ್ದೇವೆ ಎಂದು ಹೇಳುವ ಬಿಜೆಪಿ ಮುಖಂಡರು, ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ, ಇದು ಅವರ ಚಾಳಿಯಾಗಿದೆ ಎಂದು ಹಾರಿಹಾಯ್ದರು.
ಪಟ್ಟಣದಲ್ಲಿ ನಾಗಾವಿ ಎಜುಕೇಷನ್ ಹಬ್, ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಗ್ರಂಥಾಲಯ, ಸೈನ್ಸ್ ಸೆಂಟರ್, ಸರ್ಕಾರಿ ಆಸ್ಪತ್ರೆ, ಮಿನಿ ವಿಧಾನಸೌಧ, ವಿವಿಧ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಕಣ್ಣಿಗೆ ಕಾಣುವಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಆದರೆ ಬಿಜೆಪಿ ಅವರು ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ವೃಥಾ ಆರೋಪ ಮಾಡುತ್ತಿದ್ದಾರೆ ಇದು ಖಂಡನೀಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ವಿನೋದ ಗುತ್ತೇದಾರ, ಜಗದೀಶ ಚವ್ಹಾಣ, ಶಿವರಾಜ್ ಪಾಳೆದ್, ಮಾಜಿ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಮುಖಂಡರಾದ ಸುಭಾಷ್ ಜಾಧವ್, ಅಹೆಮದ್ ಸೇಠ್, ನಜೀರ್ ಅಡಕಿ, ವಿಶ್ವನಾಥ ಬೀದಿಮನಿ, ಮಹ್ಮದ್ ಎಕ್ಬಲ್ ಇದ್ದರು.