ಚಿತ್ತಾಪುರ ಪ್ರಜಾ ಸೌಧ ಎದುರುಗಡೆ ನಾಳೆ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಪ್ರತಿಭಟನಾ ಧರಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ತಾಲೂಕು ಸಮಿತಿ ವತಿಯಿಂದ ರಾಜ್ಯದ ಎಲ್ಲಾ ತಾಲೂಕು ಕಚೇರಿಗಳ ಮುಂದೆ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಜು.18 ರಂದು ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ ಅದರಂತೆ ಚಿತ್ತಾಪುರ ಪ್ರಜಾ ಸೌಧ ಎದುರುಗಡೆ ಬೆಳಿಗ್ಗೆ 11 ಗಂಟೆಗೆ ಧರಣಿ ನಡೆಸಲಾಗುವುದು ಆದ್ದರಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಖಜಾಂಚಿ ದೇವಿಂದ್ರ ಕುಮಸಿ, ತಾಲೂಕು ಸಂಚಾಲಕ ಮೋನಪ್ಪ ನಡಗೇರಿ ಅವರು ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 4 ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿತ್ತು, ಇಂದಿಗೂ ಸಹ ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ 11 ಶೇ. ಭೂಮಿ ಮಾತ್ರ ಹೊಂದಿರುತ್ತಾರೆ, 70 ರ ದಶಕದಲ್ಲಿ ಬಿ.ಬಸವಲಿಂಗಪ್ಪ ನವರ ದೂರದೃಷ್ಟಿಯ ಫಲವಾಗಿ ಪಿ.ಟಿ.ಸಿ.ಎಲ್. ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಜಾತಿವಾದಿಗಳ ಹಾಗೂ ಅಧಿಕಾರಶಾಹಿಯ ಮಸಲತ್ತಿನಿಂದ ಮತ್ತು ಸರ್ಕಾರಗಳ ಕುತಂತ್ರದಿಂದ ಪಿ.ಟಿ.ಸಿ.ಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್ಗಳಿಗೆ ಅಲೆಯುತ್ತಾ ವಂಚನೆಗೆ ಒಳಗಾಗಿದ್ದಾರೆ, ಈ ಹಿನ್ನೆಲೆಯಲ್ಲಿ ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ‘ಹೆಂಡ ಬೇಡ ಭೂಮಿ ಬೇಕು’ ಎನ್ನುವ ಘೋಷಣೆಯನ್ನು 80 ರ ದಶಕದಲ್ಲಿ ಮೊಳಗಿಸಿತು, ಆದೇ ರೀತಿ, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯಭೂಮಿ, ಗೋವುಗಳ ಗೋಮಾಳಗಳಿಗೆ ಕಾಯ್ದಿಸಿರುವ ನೆಪದಲ್ಲಿ ಒಕ್ಕಲೆಬ್ಬಿಸುವುದನ್ನು ಖಂಡಿಸುತ್ತೇವೆ.
ಸರ್ಕಾರದ ಈ ಧೋರಣೆಯನ್ನು ಖಂಡಿಸಿ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಜುಲೈ 18 ರಂದು ಪ್ರಥಮ ಹಂತವಾಗಿ ಪ್ರಜಾ ಸೌಧದ ಮುಂದೆ ಭೂಮಿ ಮಂಜೂರಾತಿಗೆ ಅಗ್ರಹಿಸಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

