ಚಿತ್ತಾಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಫೆ.28 ಕ್ಕೆ, ಚುನಾವಣೆ ವೇಳಾಪಟ್ಟಿ ತಹಶೀಲ್ದಾರ್ ಘೋಷಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರ್ಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಚಿತ್ತಾಪುರ ಪುರಸಭೆಯ 10ನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯ ವೇಳಾಪಟ್ಟಿ ಘೋಷಣೆ ಮಾಡಲಾಗಿದ್ದು ಪುರಸಭೆಯ ಎಲ್ಲಾ ಸದಸ್ಯರಿಗೆ ನೋಟಿಸ್ ತಲುಪಿಸಲು ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು 16 ಆಗಸ್ಟ್ 2024 ಉಲ್ಲೇಖಿತ (1) ಇವರ ನಡುವಳಿ ಆದೇಶದ ಮೇರೆಗೆ ಚಿತ್ತಾಪೂರ ಪುರಸಭೆ 10ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯನ್ನು ಜರುಗಿಸುವ ಕುರಿತು ತಹಸೀಲ್ದಾರರು ಚಿತ್ತಾಪುರ ಇವರಿಗೆ ಚುನಾವಣಾಧಿಕಾರಿಗಳು ಎಂದು ನೇಮಕ ಮಾಡಲಾಗಿರುತ್ತದೆ. ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಅಧಿಸೂಚನೆ 5 ಆಗಸ್ಟ್ 2024 ಉಲ್ಲೇಖಿತ (2) ರ ಪ್ರಕಾರ ಚಿತ್ತಾಪುರ ಪುರಸಭೆ ಅಧ್ಯಕ್ಷ ಸ್ಥಾನ: ಪ.ಜಾ ಮಹಿಳೆ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ: ಬಿ.ಸಿ.ಎ ಮಹಿಳೆ ವರ್ಗಕ್ಕೆ ಮೀಸಲಿರಿಸಲಾಗಿರುತ್ತದೆ.
ಕಲಬುರ್ಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಚಿತ್ತಾಪುರ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯನ್ನು ನಡೆಸುವ ಕುರಿತು ಸರ್ವ ಸದಸ್ಯರ ಸಭೆಯನ್ನು ಫೆಬ್ರವರಿ 28 ರಂದು ಚಿತ್ತಾಪುರ ಪುರಸಭೆ ಕಚೇರಿಯ ಸಭಾಂಗಣದಲ್ಲಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಚುನಾವಣಾ ವೇಳಾ ಪಟ್ಟಿ:
ನಾಮಪತ್ರ ಸಲ್ಲಿಸುವುದು ಫೆ.28 ರಂದು ಬೆಳಗ್ಗೆ 10 ರಿಂದ 12 ಗಂಟೆ, ಚುನಾವಣೆ ಸಭೆ ಮಧ್ಯಾಹ್ನ 1 ರಿಂದ 1.10 ಗಂಟೆ, ನಾಮಪತ್ರ ಪರಿಶೀಲನೆ ಮಧ್ಯಾಹ್ನ 1.15 ರಿಂದ 1.30 ಗಂಟೆ, ಉಮೇದುವಾರಿಕೆ ಹಿಂಪಡೆಯುವುದು ಮಧ್ಯಾಹ್ನ 1.30 ರಿಂದ 2 ಗಂಟೆ, ಚುನಾವಣೆ (ಅಗತ್ಯವಿದ್ದಲ್ಲಿ) ಕೈ ಎತ್ತುವ ಮೂಲಕ ಮಧ್ಯಾಹ್ನ 2.05 ಗಂಟೆ.
ಸದರಿ ಸಭೆಗೆ ಎಲ್ಲಾ ಸದಸ್ಯರು ಹಾಗೂ ಉಮೇದುದಾರರು ಚುನಾಯಿತ ಪ್ರಮಾಣ ಪತ್ರವನ್ನು ತರತಕ್ಕದ್ದು, ಅಭ್ಯರ್ಥಿಗಳು ನಾಮಪತ್ರಗಳಿಗೆ ಮೂಲ ಜಾತಿ ಪ್ರಮಾಣಪತ್ರವನ್ನು ಲಗತ್ತಿಸಬೇಕು, ಉಮೇದುದಾರರು ಬಾಕಿ ರಹಿತ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ಹಾಜರು ಪಡಿಸತಕ್ಕದ್ದು, ನೋಟಿಸು ತಲುಪಿದಕ್ಕಾಗಿ ದ್ವೀಪ್ರತಿ ಮೇಲೆ ಕಡ್ಡಾಯವಾಗಿ ದಿನಾಂಕ ನಮೂದಿಸಿ ರುಜು ಮಾಡತಕ್ಕದ್ದು ಎಂದು ತಿಳಿಸಿದ್ದಾರೆ.