ತಾಲೂಕು ಮರಳು ಮೇಲ್ವಿಚಾರಣಾ ಸಮಿತಿ ಸಭೆ, ಕೃಷಿ ಭೂಮಿಯಲ್ಲಿ ಅನಧಿಕೃತ ಮರಳು ಸಂಗ್ರಹಿಸಿದ್ದರೆ ಮಾಲಿಕರ ಮೇಲೆ ಎಫ್ಐಆರ್ ದಾಖಲು: ಎಸಿ ಎಚ್ಚರಿಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕೃಷಿ ಭೂಮಿಯಲ್ಲಿ ಅಕ್ರಮ ಕಾನೂನು ಬಾಹಿರವಾಗಿ ಹಾಗೂ ಅನಧಿಕೃತ ಮರಳು ಸಂಗ್ರಹ ಮಾಡಿರುವುದು ಕಂಡುಬಂದರೆ ಮಾಲಿಕರ ಮೇಲೆ ಎಫ್ಐಆರ್ ದಾಖಲು ಮಾಡಲಾಗುವುದು ಎಂದು ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮರಳು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಭೂಮಿಯಲ್ಲಿ ಅನಧಿಕೃತ ಮರಳು ಸಂಗ್ರಹವಾದ ಮಾಹಿತಿಯನ್ನು ಪಿಡಿಒ ಅಥವಾ ಆರ್.ಐ ಅವರು ಮಾಡಿದರೆ ಆ ಭೂಮಿಯನ್ನು ಕರ್ನಾಟಕ ಸರ್ಕಾರ ಎಂದು ಪಹಣಿ ಮಾಡಲಾಗುವುದು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ನಾವು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಎಷ್ಟೇ ಪ್ರಯತ್ನ ಮಾಡಿದರೂ ಹಾಗೂ ಎಷ್ಟೋ ಪ್ರಕರಣಗಳು ದಾಖಲು ಮಾಡಿದ್ದರೂ ಸಹ ತಾಲೂಕು ಮರಳು ಮೇಲ್ವಿಚಾರಣಾ ಸಮಿತಿ ವಿಫಲ ಆಗಿದೆ ಎಂಬ ಹಣೆಪಟ್ಟಿ ಕೆಟ್ಟ ಹೆಸರು ಬಂದಿದೆ ಎಂದು ಎಸಿ ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ ಮರಳು ಸಾಗಣೆ ತಡೆಗಟ್ಟುವಲ್ಲಿ ತಾಲೂಕು ಮರಳು ಮೇಲ್ವಿಚಾರಣಾ ಸಮಿತಿಯ ಎಲ್ಲಾ 13 ಇಲಾಖೆಗಳ ಪಾತ್ರ ಇದೆ ಇದನ್ನು ಸ್ವಲ್ಪ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸೇಡಂ ಸಹಾಯಕ ಆಯುಕ್ತರು ಸೂಕ್ಷ್ಮವಾಗಿ ಎಚ್ಚರಿಸಿದರು
ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ತಾಲೂಕಿನಲ್ಲಿ ಒಂದು ತಿಂಗಳಿಂದ ಮರಳು ಸಾಗಣೆ ಮತ್ತು ಮಾರಾಟ ಬಂದ್ ಆಗಿದೆ ಹಾಗೂ ಯಾವುದಕ್ಕೂ ಪರವಾನಿಗೆ ನೀಡಿಲ್ಲ ಹೀಗಾಗಿ ಯಾವುದೇ ಟ್ರ್ಯಾಕ್ಟರ್ ಅಥವಾ ಟಿಪ್ಪರ್ ಅಲ್ಲ ಕನಿಷ್ಠ 10 ಕೆಜಿಯಷ್ಟು ಮರಳು ಸಾಗಣೆ ಆದರೆ ಆದರೂ ಅನಧಿಕೃತ ಹಾಗೂ ಕಾನೂನು ಬಾಹಿರ ಹೀಗಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾಗಲಿ ಕಂದಾಯ ನಿರೀಕ್ಷಕರಾಗಲಿ ಅಥವಾ ಸಮಿತಿಯ ಸದಸ್ಯರು ಇದನ್ನು ಗಮನದಲ್ಲಿಟ್ಟುಕೊಂಡು ಸೀಜ್ ಮಾಡಿ ಏನಾದರೂ ಅಡೆತಡೆ ತೊಂದರೆ ಆದರೆ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಹೇಳಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ ಅಕ್ರಮ ಮರಳುಗಾರಿಕೆ ಸಂಬಂಧಿಸಿದಂತೆ ಚಿತ್ತಾಪುರ ವ್ಯಾಪ್ತಿಯಲ್ಲಿ 2024 ರಲ್ಲಿ 32 ಹಾಗೂ 2025 ರಲ್ಲಿ 9 ಸೇರಿದಂತೆ ಒಟ್ಟು 41 ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಮುಡಬೂಳ, ಕದ್ದರಗಿ ಸೇರಿದಂತೆ ಇತರ ಕಡೆ ಚೆಕ್ ಪೋಸ್ಟ್ ಹಾಕಲಾಗಿದೆ. ಪೊಲೀಸರು 24×7 ರೀತಿಯಲ್ಲಿ ಸೇವೆಯಲ್ಲಿರುತ್ತಾರೆ ಹೀಗಾಗಿ ಯಾವುದೇ ತಕರಾರು ಆಕ್ಷೇಪಣೆ ಬಂದರೆ ಕೂಡಲೇ ಪೊಲೀಸರಿಗೆ ಸಂಪರ್ಕಿಸಿ ಎಂದು ಹೇಳಿದರು.
ತಾಲೂಕಿನಲ್ಲಿ 12 ಪಟ್ಟಾ ಜಮೀನಿನಲ್ಲಿ ಹಾಗೂ ಒಂದು ಕೆಆರ್’ಐಡಿಎಲ್ ವ್ಯಾಪ್ತಿ ಸೇರಿದಂತೆ ಒಟ್ಟು 13 ಕಡೆ ಮರುಳುಗಾರಿಕೆ ನಡೆಯುತ್ತಿದೆ ಇದರಲ್ಲಿ ಎರಡು ಕಾರ್ಯದಲ್ಲಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ತಾಪಂ ಇಓ ಮೊಹಮ್ಮದ್ ಅಕ್ರಂ ಪಾಷಾ, ಎಡಿ ಪಂಡಿತ್ ಸಿಂದೆ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ವಾಡಿ ಮುಖ್ಯಾಧಿಕಾರಿ ಫಕ್ರುದ್ದೀನ್ ಸಾಬ್, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್, ಕುಡಿಯುವ ನೀರಿನ ಅಧಿಕಾರಿ ರಾಜಕುಮಾರ್ ಅಕ್ಕಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು
ತಾಲೂಕು ಮರಳು ಮೇಲ್ವಿಚಾರಣಾ ಸಮಿತಿ:
ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರು (ಅಧ್ಯಕ್ಷರು), ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕಿನ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿರುವ ಉಪ ಪೊಲೀಸ್ ಅಧೀಕ್ಷಕರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪ್ರಮುಖ ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ವಲಯ ಅರಣ್ಯ ಅಧಿಕಾರಿಗಳು, ಸಂಬಂಧಪಟ್ಟ ಸಾರಿಗೆ ಇಲಾಖೆಯ ತಾಲೂಕಿನ ಮೋಟಾರು ವಾಹನ ನಿರೀಕ್ಷಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಬಂಧಪಟ್ಟ ಅಧಿಕಾರಿ, ಸಂಬಂಧಪಟ್ಟ ಭೂವಿಜ್ಞಾನಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಂಬಂಧಪಟ್ಟ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು, ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಸಂಬಂಧಪಟ್ಟ ಮರಳು ಹೊಂದಿರುವ ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ (ಸದಸ್ಯರು), ತಾಲೂಕಿನ ತಹಶೀಲ್ದಾರ್ (ಸದಸ್ಯ-ಕಾರ್ಯದರ್ಶಿ).
“ಕೃಷಿ ಭೂಮಿಯಲ್ಲಿ ಅನಧಿಕೃತ ಮರಳು ಸಂಗ್ರಹವಾದ ಮಾಹಿತಿ ಬಂದರೆ ಆ ಭೂಮಿಯನ್ನು ಕರ್ನಾಟಕ ಸರ್ಕಾರ ಎಂದು ಪಹಣಿ ಮಾಡಿ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಹೀಗಾಗಿ ರೈತರು ಈ ಕಡೆ ಗಮನ ಹರಿಸಿ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ನೀಡಬೇಡಿ”.-ನಾಗಯ್ಯ ಹಿರೇಮಠ ತಹಸೀಲ್ದಾರರು ಚಿತ್ತಾಪುರ.