ಚಿತ್ತಾಪುರದಲ್ಲಿ ನಾಳೆ ತಿರಂಗಾ ಯಾತ್ರೆ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ರವೀಂದ್ರ ಸಜ್ಜನಶೆಟ್ಟಿ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನಲೆಯಲ್ಲಿ ಭಾರತೀಯ ಸೈನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಹಾಗೂ ಅವರನ್ನು ಬೆಂಬಲಿಸುವ ಉದ್ದೇಶದಿಂದ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ವೇದಿಕೆ ವತಿಯಿಂದ ಮೇ.21 ರಂದು ಸಾಯಂಕಾಲ 4 ಗಂಟೆಗೆ ಪಟ್ಟಣದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಚಿತ್ತಾವಲಿ ವೃತ್ತದಿಂದ ಪ್ರಾರಂಭವಾಗುವ ತಿರಂಗಾ ಯಾತ್ರೆ ಕಪ್ಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ಬಸವೇಶ್ವರ ವೃತ್ತದ ಹತ್ತಿರ ಸಮಾವೇಶಗೊಂಡು ನಂತರ ಮಠಾಧೀಶರು ಮತ್ತು ಪ್ರಮುಖರು ಮಾತನಾಡಲಿದ್ದಾರೆ. ತಿರಂಗಾ ಯಾತ್ರೆಯಲ್ಲಿ ವಿಶೇಷವಾಗಿ 100 ಮೀ. ಉದ್ದದ ರಾಷ್ಟ್ರ ಧ್ವಜದ ಮೆರವಣಿಗೆ ನಡೆಯಲಿದೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕೋರಿದ್ದಾರೆ.
ತಿರಂಗಾ ಯಾತ್ರೆ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ನಡೆಯಲಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ಕನ್ನಡಪರ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು, ಹಮಾಲರ ಸಂಘ, ಕಿರಾಣಾ ಹಾಗೂ ಬಟ್ಟೆ ವ್ಯಾಪಾರಿಗಳ ಸಂಘ ಸೇರಿದಂತೆ, ಮಾಜಿ ಸೈನಿಕರು, ಮಠಾಧೀಶರು ಭಾಗವಹಿಸಲಿದ್ದಾರೆ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತಿತರೆ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗಿದೆ ಹೀಗಾಗಿ ಎಲ್ಲರೂ ಕೈಜೋಡಿಸಿ ಈ ತಿರಂಗಾ ಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪುರಸಭೆ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಇಟಗಿ, ನಾಗರಾಜ ಹೂಗಾರ, ಪ್ರಸಾದ್ ಅವಂಟಿ, ವಕ್ತಾರ ಶಿವರಾಮ ಚವ್ಹಾಣ ಇದ್ದರು.