Oplus_0

ಚುನಾವಣಾಧಿಕಾರಿಗಳಿಗೆ ದೂರು | ಚಿತ್ತಾಪುರದಲ್ಲಿ ಅನಧಿಕೃತ ಎಸ್ಐಆರ್ ನಮೂನೆ ಭರ್ತಿ ಮಾಡುವ ಶಿಬಿರದ ತನಿಖೆಗೆ ಮಣಿಕಂಠ ರಾಠೋಡ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಮರ್ಕಜ್ ಮಸೀದ್-ಎ-ಅಹ್ಲೆ ಹದೀಸ್‌ನ ಮದ್ರಸಾದಲ್ಲಿ ‘ಜಮಿಯತ್-ಎ-ಅಹ್ಲೆ ಹದೀಸ್ ಚಿತ್ತಾಪುರ’ ಸಂಘಟನೆಯು ಜು.5 ರಂದು ಸಾರ್ವಜನಿಕವಾಗಿ ಆಯೋಜಿಸಿದ್ದ SIR (ವಿಶೇಷ ತೀವ್ರಗತಿಯ ಪರಿಷ್ಕರಣೆ – Special Intensive Revision) ನಮೂನೆ ಭರ್ತಿ ಮಾಡುವ ಶಿಬಿರದ ಕುರಿತು ತಕ್ಷಣದ ತನಿಖೆ ನಡೆಸಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಆಗ್ರಹಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಈ ಕುರಿತು ಮುಖ್ಯ ಚುನಾವಣಾ ಅಧಿಕಾರಿ ಬೆಂಗಳೂರು, ಜಿಲ್ಲಾ ಚುನಾವಣಾ ಅಧಿಕಾರಿ ಕಲಬುರಗಿ, ಚುನಾವಣಾ ನೋಂದಣಿ ಅಧಿಕಾರಿ (ERO), ಚಿತ್ತಾಪುರ ಅವರಿಗೆ ದೂರು ಸಲ್ಲಿಸಿದ್ದೇನೆ ಎಂದು ಹೇಳಿದರು.

SIR ಪ್ರಕ್ರಿಯೆಯು ಭಾರತೀಯ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ, ಅಧಿಕೃತ ಚುನಾವಣಾ ಅಧಿಕಾರಿಗಳ ಮೂಲಕ ನಡೆಸಲ್ಪಡುವ ಒಂದು ಅಧಿಕೃತ ಕಾರ್ಯವಿಧಾನವಾಗಿದೆ. ಆದ್ದರಿಂದ, SIR ಪ್ರಕ್ರಿಯೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವ ಯಾವುದೇ ಖಾಸಗಿ ಸಂಸ್ಥೆಯು ಚುನಾವಣಾ ಆಯೋಗದ ಸೂಚನೆಗಳು ಮತ್ತು ಅನ್ವಯವಾಗುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

ಅಕ್ರಮವಾಗಿ ನಡೆಯುತ್ತಿದ್ದ ಶಿಬಿರಕ್ಕೆ ನಾನು ಭೇಟಿ ನೀಡಿದಾಗ, ಅಲ್ಲಿ ಚುನಾವಣಾ ಆಯೋಗದ ಯಾವುದೇ ಅಧಿಕೃತ ಅಧಿಕಾರಿ, ಬೂತ್ ಮಟ್ಟದ ಅಧಿಕಾರಿ (BLO), ಚುನಾವಣಾ ನೋಂದಣಿ ಅಧಿಕಾರಿ (ERO) ಅಥವಾ ಸರ್ಕಾರದ ಯಾವುದೇ ಚುನಾವಣಾ ಅಧಿಕಾರಿ ಉಪಸ್ಥಿತರಿರಲಿಲ್ಲ. ಈ ಚಟುವಟಿಕೆಗಳನ್ನು ಆಯೋಜಕ ಸಂಸ್ಥೆಗೆ ಸಂಬಂಧಿಸಿದ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವುದು ಕಂಡುಬಂದಿತ್ತು ಎಂದು ತಿಳಿಸಿದರು.

ಶಿಬಿರದ ವಿಡಿಯೋ ರೆಕಾರ್ಡಿಂಗ್ ಹಾಗೂ ಸಾರ್ವಜನಿಕ ಜಾಹೀರಾತು/ಪೋಸ್ಟರ್ ಅನ್ನು ಸಲ್ಲಿಸಿದ್ದೇನೆ. ಸದರಿ SIR ನಮೂನೆ ಭರ್ತಿ ಮಾಡುವ ಶಿಬಿರಕ್ಕೆ ಭಾರತೀಯ ಚುನಾವಣಾ ಆಯೋಗ ಅಥವಾ ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ ಅವರಿಂದ ಅಧಿಕೃತ ಅನುಮತಿ ಪಡೆಯಲಾಗಿದೆಯೇ, ಶಿಬಿರವನ್ನು ನಡೆಸುತ್ತಿದ್ದ ವ್ಯಕ್ತಿಗಳಿಗೆ SIR ನಮೂನೆಗಳನ್ನು ಅಥವಾ ಮತದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರ ನೀಡಲಾಗಿದೆಯೇ?, ಅನಧಿಕೃತ ದಾಖಲೆಗಳ ಪರಿಶೀಲನೆ, ಮತದಾರರ ದತ್ತಾಂಶ ಸಂಗ್ರಹಣೆ ಅಥವಾ ಚುನಾವಣಾ ಆಯೋಗದ ಅಧಿಕಾರಿಗಳೆಂದು ಬಿಂಬಿಸಿಕೊಳ್ಳುವಂತಹ ಕೃತ್ಯಗಳು ನಡೆದಿವೆಯೇ?, ಶಿಬಿರದಲ್ಲಿ ನಡೆಸಲಾದ ಚಟುವಟಿಕೆಗಳು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆ, 1960 ರ ಮತದಾರರ ನೋಂದಣಿ ನಿಯಮಗಳು ಮತ್ತು ಚುನಾವಣಾ ಆಯೋಗದ SIR ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ ಎಂದು ದೂರಿನಲ್ಲಿ ಪ್ರಶ್ನಿಸಿದ್ದೇನೆ ಎಂದರು.

ಚುನಾವಣಾ ಆಯೋಗದ ಸೂಚನೆಗಳು ಅಥವಾ ಅನ್ವಯವಾಗುವ ಕಾನೂನಿನ ಯಾವುದೇ ಉಲ್ಲಂಘನೆ ಕಂಡುಬಂದರೆ, ಜವಾಬ್ದಾರಿಯುತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ. ಈ ವಿಷಯದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್ಐಆರ್ ಪ್ರಕ್ರಿಯೆ ಇಡೀ ದೇಶದಲ್ಲಿ  ಒಂದು ರೀತಿಯಲ್ಲಿ ನಡೆದಿದ್ದರೆ ಕರ್ನಾಟಕದಲ್ಲಿ ಮಾತ್ರ ಒಂದು ರೀತಿ ನಡೆಯುತ್ತಿದೆ, ಇಲ್ಲಿನ ಕಾಂಗ್ರೆಸ್ ನಾಯಕರು ಅಧಿಕಾರಿಗಳ ಮೀಟಿಂಗ್ ಮಾಡಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಒತ್ತು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮತದಾನದ ಹಕ್ಕು ಶ್ರೇಷ್ಠ ಹಕ್ಕು ಹೀಗಾಗಿ ಗುಳೆ ಹೊದವರು ಬಂದು ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿ ಏನಾದರೂ ಸಮಸ್ಯೆ ಗೊಂದಲ ಇದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಮನವಿ ಮಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಚಿತ್ತಾಪುರದಲ್ಲಿ ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಎಸ್ಐಆರ್ ಚಟುವಟಿಕೆಗಳು ನಡೆಯುತ್ತಿವೆ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ತಹಸೀಲ್ದಾರ್ ಅವರಿಗೆ ಆಗ್ರಹಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅಶ್ವಥ್ ರಾಠೋಡ, ಎಂ.ಡಿ ಯುನುಸ್, ವಿಜಯ ಪಾಟೀಲ, ಪ್ರಿನ್ಸ್ ಪಾಂಡು ಸೇರಿದಂತೆ ಇತರರು ಇದ್ದರು.

“ಚಿತ್ತಾಪುರದಲ್ಲಿ ನೋಂದಣಿ ರಹಿತ ಸಂಘಟನೆಗಳಿಂದ ಎಸ್ಐಆರ್ ಬಗ್ಗೆ ಜನರಲ್ಲಿ ಭಯವನ್ನು ಹುಟ್ಟಿಸುವ ಮತ್ತು ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದೆ ಇದನ್ನು ತಡೆಹಿಡಿಯಬೇಕು ಇಲ್ಲದಿದ್ದರೆ ಆ ಕೆಲಸ ನಾವು ಮಾಡಬೇಕಾಗುತ್ತದೆ”.-ಮಣಿಕಂಠ ರಾಠೋಡ ಬಿಜೆಪಿ ಪರಾಜಿತ ಅಭ್ಯರ್ಥಿ ಚಿತ್ತಾಪುರ

Spread the love

Leave a Reply

Your email address will not be published. Required fields are marked *

error: Content is protected !!