ಚಿತ್ತಾಪುರದಲ್ಲಿ ದಿ.ವಿಠಲ್ ಹೇರೂರು ಅವರ 11 ನೇ ಪುಣ್ಯ ಸ್ಮರಣೆ, ವಿಠಲ್ ಹೇರೂರು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಬೆನಕನಳ್ಳಿ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೋಲಿ ಸಮಾಜದ ಧೀಮಂತ ನಾಯಕು, ಹೋರಾಟಗಾರರು ದಿ.ವಿಠಲ್ ಹೇರೂರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೋಲಿ ಸಮಾಜದ ಮುಖಂಡ ಸುರೇಶ್ ಬೆನಕನಳ್ಳಿ ಕರೆ ನಿಡಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ತಾಲೂಕು ಕೋಲಿ ಸಮಾಜದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ದಿ.ವಿಠಲ್ ಹೇರೂರು ಅವರ 11 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತ್ಯದ ಹಾದಿಯಲ್ಲಿ ನಡೆದ ಎಕೈಕ ನಾಯಕರಾದ ವಿಠಲ್ ಹೇರೂರು ಅವರು ಒಂದು ಕೂಗು ಹಾಕಿದರೆ ಸಾವಿರ ಅಲ್ಲ ಲಕ್ಷಾಂತರ ಜನರು ಸೇರುತ್ತಿದ್ದರು ಅಂತಹ ಶಕ್ತಿ ಅವರಲ್ಲಿತ್ತು ಎಂದು ಸ್ಮರಿಸಿದರು.
ಸಮಾಜದ ಹಿರಿಯ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ, ವಿಠಲ್ ಹೇರೂರು ಅವರ ಜೀವನವೇ ಹೋರಾಟಮಯವಾಗಿತ್ತು, ಅವರ ಹೋರಾಟದ ಪ್ರತಿಫಲವಾಗಿ ಇಂದು ಕೋಲಿ ಸಮಾಜ, ಸಮಾಜದ ಮುಖ್ಯವಾಹಿನಿಗೆ ಬಂದಿದೆ. ಹೀಗಾಗಿ ಕೋಲಿ ಸಮಾಜಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಮುಖಂಡ ದೇವಿಂದ್ರ ಅರಣಕಲ್ ಮಾತನಾಡಿ, ವಿಠಲ್ ಹೇರೂರು ಅವರು ನಮಗೆ ಶಕ್ತಿಯಾಗಿದ್ದರು, ಅವರ ಆದರ್ಶ ನಮ್ಮ ಜೀವನಕ್ಕೆ ಪ್ರೇರಣೆಯಾಗಿದೆ. ಅವರು ತಮ್ಮ ಕೊನೆಯ ದಿನಗಳಲ್ಲಿಯೂ ಸಮಾಜಕ್ಕಾಗಿಯೇ ಇಡೀ ಜೀವನ ಮುಡಿಪಾಗಿಟ್ಟಿದ್ದರು, ಅವರಿಗೆ ಚಿತ್ತಾಪುರ ಕೋಲಿ ಸಮಾಜದ ಮೇಲೆ ಬಹಳ ಪ್ರೀತಿ ಇತ್ತು ಎಂದು ಸ್ಮರಿಸಿದರು.
ಯುವ ಮುಖಂಡ ಗುಂಡು ಐನಾಪುರ ಮಾತನಾಡಿ, ವಿಠಲ್ ಹೇರೂರು ಅವರು ಸ್ವಾಭಿಮಾನದ ಸಿಂಹವಾಗಿದ್ದರು ಹೀಗಾಗಿ ನಾವು ಕೂಡ ಸ್ವಾಭಿಮಾನಿಗಳಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಕೋಲಿ ಸಮಾಜದ ಜನಸಂಖ್ಯೆ ಹೆಚ್ಚಾಗಿದೆ ಆದರೆ ಸಮಾಜ ಸದೃಢ ಆಗಿಲ್ಲ ಹೀಗಾಗಿ ಎಲ್ಲರೂ ಸ್ವಾಭಿಮಾನಿಗಳಾಗಿ ಒಗ್ಗೂಡಿ ಸಮಾಜದ ಸಂಘಟನೆಗೆ ಮುಂದಾಗಬೇಕು ಎಂದರು.
ಮುಖಂಡರಾದ ರಾಮಲಿಂಗ ಬಾನರ್, ಹಣಮಂತ ಸಂಕನೂರ, ನಾಗೇಂದ್ರ ಜೈಗಂಗಾ, ಭೀಮಾಶಂಕರ ಹೋಳಿಕಟ್ಟಿ, ಕರಣಪ್ಪ ಹಲಕಟ್ಟಿ, ರಾಜೇಶ್ ಹೋಳಿಕಟ್ಬಿ, ಶೇಖರ್ ಆಲೂರ, ಪತ್ರಕರ್ತ ಕಾಶಿನಾಥ ಗುತ್ತೇದಾರ ಅವರು ಮಾತನಾಡಿದರು.
ಮುಖಂಡರಾದ ಭೀಮರಾಯ ಹೊತಿನಮಡಿ, ಲಕ್ಷ್ಮೀಕಾಂತ ಸಾಲಿ, ನಿಂಗಣ್ಣ ಹೆಗಲೇರಿ, ಕಾಶಪ್ಪ ಡೋಣಗಾಂವ, ಶರಣು ಸಿದ್ರಾಮಗೋಳ, ದಶರಥ ದೊಡ್ಡಮನಿ, ಪ್ರಭು ಹಲಕಟ್ಟಿ, ಮಹಾದೇವ ಮುಗುಟಿ, ಸಂತೋಷ ಮಳಬಾ, ದೇವಾನಂದ ಮುತ್ತಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.