ಗಾಂಧಿನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರ ಪುತ್ರನ ಮದುವೆ ನೆಪದಲ್ಲಿ ಶಾಲೆಗೆ ರಜೆ ನೀಡಿದ ಮುಖ್ಯಗರುಗಳ ವಿರುದ್ಧ ಶಿಸ್ತು ಕ್ರಮಕ್ಕೆ ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಗಾಂಧಿನಗರ (ಲಕ್ಷ್ಮಿಪುರವಾಡಿ, ಸೀತಾರಾಮವಾಡಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರ ಪುತ್ರನ ಮದುವೆ ನೆಪದಲ್ಲಿ ಶಾಲೆಗೆ ರಜೆ ನೀಡಿದ ಮುಖ್ಯಗರುಗಳ ವಿರುದ್ಧ ಶಿಸ್ತುಕ್ರಮ ಕೈಕೊಂಡು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಅವರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಚಿತ್ತಾಪುರ ಮತಕ್ಷೇತ್ರದ ಗಾಂಧಿನಗರ (ಲಕ್ಷ್ಮಿಪುರವಾಡಿ, ಸೀತಾರಾಮವಾಡಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಶೀಲಾಬಾಯಿ ಅವರ ಮಗನ ಮದುವೆ ಪ್ರಯುಕ್ತ ಮಂಗಳವಾರ ಅರ್ಧ ದಿನಕ್ಕೆ ಶಾಲೆ ರಜೆ ನೀಡಿದ ಮುಖ್ಯಗುರುಗಳು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ತಾವೇ ಸ್ವಯಂಪ್ರೇರಿತವಾಗಿ ದುರಹಂಕಾರದಿಂದ ಶಾಲೆಗೆ ರಜೆ ನೀಡುವ ಮೂಲಕ ಸರ್ಕಾರದ ಹಾಗೂ ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದಾರೆ.
ಶಾಲಾ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಆದರೆ ಇಲ್ಲಿನ ಮುಖ್ಯಶಿಕ್ಷಕರು ಮದುವೆ ನೆಪದಲ್ಲಿ ಇಡೀ ಶಾಲೆಗೆ ರಜೆ ನೀಡಿದ್ದು ಅಕ್ಷಮ್ಯ ಅಪರಾಧವಾಗಿದೆ. ಈ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬಿದ್ದಂತಾಗಿದೆ, ಇಂತಹ ಬೇಜವಾಬ್ದಾರಿ ಮುಖ್ಯಶಿಕ್ಷಕರಿಂದಲೇ ಸರ್ಕಾರಿ ಶಾಲೆಗಳಿಗೆ ಕೆಟ್ಟ ಹೆಸರು ಬರುತ್ತಿದೆ ಹಾಗೂ ಶಾಲಾ ದಾಖಲಾತಿ ಕುಂಠಿತಗೊಳ್ಳುತ್ತದೆ ಎಂದು ಹೇಳಿದರು.
ನಿಯಮ ಮೀರಿ ಶಾಲೆಗೆ ರಜೆ ನೀಡಿದ ಮುಖ್ಯಗುರುಗಳು ತಪ್ಪು ಮಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದೆ, ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬರೀ ನೋಟಿಸ್ ನೀಡಿ ಕೈತೊಳೆದುಕೊಂಡರೆ ಸಾಲದು ಕೂಡಲೇ ಶಿಸ್ತು ಕ್ರಮ ಕೈಗೊಂಡು ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಚಂದರ್ ಚವ್ಹಾಣ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ರಾಹುಲ ಶಾಸ್ತ್ರೀ, ಇರ್ಫಾನ್, ಮಾಜೀದ್, ಸಂಜು ರಾಠೋಡ, ಸಂತೋಷ ಚವ್ಹಾಣ ಇದ್ದರು.