ಗಾಂಧಿನಗರ ಶಿಕ್ಷಕಿಯೊಬ್ಬರ ಪುತ್ರನ ಮದುವೆ ನಿಮಿತ್ತ ಶಾಲೆಗೆ ರಜೆ ನೀಡಿದ ಮುಖ್ಯಗುರುಗಳಿಗೆ ಬಿಇಒ ಶಶಿಧರ ಬಿರಾದಾರ ನೋಟಿಸ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಗಾಂಧಿನಗರ (ಸೀತಾರಾಮವಾಡಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಶೀಲಾಬಾಯಿ ಅವರ ಮಗನ ಮದುವೆ ಪ್ರಯುಕ್ತ ಮಂಗಳವಾರ ಅರ್ಧ ದಿನಕ್ಕೆ ಶಾಲೆ ರಜೆ ನೀಡಿದ ಮುಖ್ಯಗುರುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ನೋಟಿಸ್ ನೀಡಿದ್ದಾರೆ.
ಶಿಕ್ಷಕಿಯೊಬ್ಬರ ಪುತ್ರನ ಮದುವೆ ನಿಮಿತ್ತ ಮುಖ್ಯಗುರುಗಳು ಶಾಲೆಗೆ ರಜೆ ನೀಡಿದ ಪ್ರಸಂಗ ಮಂಗಳವಾರ ಬೆಳಕಿಗೆ ಬಂದಿತ್ತು ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗೆ ಸ್ಪಂದಿಸಿ ಬುಧವಾರ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯಗುರು, ಸಹಶಿಕ್ಷಕರ ಸಭೆ ನಡೆಸಿ ತರಾಟೆಗೆ ತೆಗೆದುಕೊಂಡು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಮಾತ್ರ ಅಧಿಕಾರಿಗಳು ಸ್ಥಳೀಯ ಮಟ್ಟದ ರಜೆ ಘೋಷಣೆ ಮಾಡುತ್ತಾರೆ ಆದರೆ ಇಲ್ಲಿನ ಮುಖ್ಯಗುರುಗಳು, ಮದುವೆ ಪ್ರಯುಕ್ತ ತಾವೇ ಸ್ವತಃ ರಜೆ ನೀಡಿರುವುದು ತಪ್ಪು ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಗುರುಗಳಿಗೆ ನೋಟಿಸ್ ನೀಡಲಾಗಿದೆ, ಒಂದು ವಾರದೊಳಗೆ ಉತ್ತರ ನೀಡದಿದ್ದಲ್ಲಿ ಹಾಗೂ ನೀಡಿದ ಉತ್ತರ ಸಮಂಜಸ ಇಲ್ಲದಿದ್ದರೆ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಾಗಾವಿ ಎಕ್ಸಪ್ರೆಸ್ ಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ್ ನಾಯ್ಕೋಡಿ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.