ಗಿರಿಸಿರಿ ಕಲಾ ಸಂಭ್ರಮ | ಸ್ವಾಗತ ಸಮಿತಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ್ ಅಧಿಕೃತ ಆಹ್ವಾನ, ಸನ್ಮಾನ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರದ ಜಗದಂಬಾ ಮಂದಿರದಲ್ಲಿ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ಗಿರಿಸಿರಿ ಸಂಗೀತ ಕಲಾ ಸಂಭ್ರಮ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಸೇವಕ ನಿಂಗಪ್ಪ ಹುಳಗೋಳಕರ್ ಅವರನ್ನು ಗಿರಿಸಿರಿ ಕಲಾ ಸಂಸ್ಥೆ ವತಿಯಿಂದ ಅವರ ಕಚೇರಿಯಲ್ಲಿ ಸನ್ಮಾನಿಸಿ, ಅಧಿಕೃತ ಆಹ್ವಾನ ನೀಡಲಾಯಿತು.
ಆಹ್ವಾನ ಸ್ವೀಕರಿಸಿ ಮಾತನಾಡಿದ ನಿಂಗಪ್ಪ ಹುಳಗೋಳಕರ್, ಗಿರಿಸಿರಿ ಕಲಾ ಸಂಸ್ಥೆಯ ಮರಲಿಂಗ ಯಾದಗಿರಿ ಅವರು ಪ್ರತಿವರ್ಷ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ವಿಭಿನ್ನವಾಗಿ ಆಯೋಜಿಸುತ್ತಿದ್ದಾರೆ. ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಗೆ ಶ್ರಮಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಮೂಲಕ ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ಸಂಸ್ಥೆಗೆ ಎಲ್ಲರೂ ಬೆಂಬಲ ನೀಡಬೇಕು ಎಂದರು.
ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ನಿಂಗಪ್ಪ ಹುಳಗೋಳಕರ್ ಹಾಗೂ ಸಮಾರಂಭದ ಅಧ್ಯಕ್ಷರಾಗಿ ಪತ್ರಕರ್ತ ಲೋಹಿತ್ ಕಟ್ಟಿ ಅವರನ್ನು ಆಯ್ಕೆ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಶಿವಲಿಂಗಪ್ಪ ಹೆಬ್ಬಾಳ್ಕರ, ಕಾಶಣ್ಣ ಚೆನ್ನೂರ, ಉಪನ್ಯಾಸಕ ಮರಲಿಂಗ ಯಾದಗಿರಿ, ನಾಗೇಂದ್ರ ನಾಟೀಕಾರ, ಅಶೋಕ ಪೂಜಾರಿ, ಪರಶುರಾಮ ಚಲುವಾದಿ ಹಾಗೂ ಉದಯ ಯನಗುಂಟಿ, ಶಿವರಾಮ ಉಪಸ್ಥಿತರಿದ್ದರು.
