Oplus_0

ಗುಲ್ಬರ್ಗ ವಿವಿಯಲ್ಲಿ ಸಂತಶ್ರೀ ಸೇವಾಲಾಲ್ ಜಯಂತಿ ಆಚರಣೆ | ಬಂಜಾರಾ ಇತಿಹಾಸದ ಸಮಗ್ರ ಅಧ್ಯಯನ ಅಗತ್ಯ : ಡಾ.ಉಮೇಶ್ ಜಾಧವ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಬಂಜಾರಾ ಜನಾಂಗದ ಸಮಗ್ರ ಇತಿಹಾಸದ ಅಧ್ಯಯನ ಮಾಡಿ ಬೆಳಕಿಗೆ ತರಲು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಸಂತ ಶ್ರೀ ಸೇವಾಲಾಲ್ ಅಧ್ಯಯನ ಪೀಠ ಮುಂದಾಗಬೇಕು ಎಂದು ಮಾಜಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅಭಿಪ್ರಾಯಪಟ್ಟರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂತ ಶ್ರೀ ಸೇವಾಲಾಲ್ ಅಧ್ಯಯನ ಪೀಠದ ಆಶ್ರಯದಲ್ಲಿ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಸೋಮವಾರ ನಡೆದ ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಒಂದೇ ಭಾಷೆಯನ್ನಾಡುವ ಬಂಜಾರಾ ಜನಾಂಗದ ಆಹಾರ, ಉಡುಗೆ ತೊಡುಗೆ, ಆಚಾರ ವಿಚಾರ ಮತ್ತು ಸಂಸ್ಕೃತಿಗಳು ಸಮಾನವಾಗಿದ್ದು ಈ ಬಗ್ಗೆ ದಾಖಲು ಮಾಡಲು ಸಮಗ್ರ ಅಧ್ಯಯನ ನಡೆಸಿ ಇತಿಹಾಸದ ಸಂಶೋಧನೆ ಅತ್ಯಗತ್ಯವಾಗಿದೆ. ಮೌಖಿಕ ಸಾಹಿತ್ಯ ಮತ್ತು ಜನಪದ ಹಾಡುಗಳಲ್ಲಿ ಅಡಕವಾಗಿರುವ ಬಂಜಾರಾ ಸಂಸ್ಕೃತಿಯ ಬಗ್ಗೆ ಅಧ್ಯಯನ ಪೀಠವು ಪಿಎಚ್ ಡಿ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿ ಜನಾಂಗದ ಚರಿತ್ರೆಯ ಬಗ್ಗೆ ಹೊಸ ಬೆಳಕು ಚೆಲ್ಲಬೇಕಾಗಿದೆ  ಎಂದು ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ಬಂಜಾರಾ ಸಮುದಾಯದ ಸುಮಾರು ಎರಡುವರೆ ಲಕ್ಷ ಜನರಿದ್ದಾರೆ. ಸೇವಾಲಾಲ್ ಅಧ್ಯಯನ ಪೀಠದ ನಿರ್ದೇಶಕರು, ಕುಲಪತಿಗಳ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ಪೌರಾದೇವಿಗೆ ವಿದ್ಯಾರ್ಥಿಗಳನ್ನು ಕರೆದೊಯ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ಕೊಟ್ಟ ಅಲ್ಲಿನ ಇತಿಹಾಸ ಸಾರುವ ಸಂಗ್ರಹಾಲಯಕ್ಕೆ ಸಂದರ್ಶನ ಮಾಡಿ ಅಧ್ಯಯನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಡಾ.ಜಾಧವ್ ಸಲಹೆ ನೀಡಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಈ. ಟಿ ಪುಟ್ಟಯ್ಯ ಮಾತನಾಡಿ, ಸಂತ ಶ್ರೀ ಸೇವಾಲಾಲರ ಮತ್ತು ಬಸವಣ್ಣನವರ ತತ್ವಗಳು ಸಮಾನವಾಗಿದ್ದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಜನಿಸಿದ ಸೇವಾಲಾಲರು ಪ್ರಕೃತಿಯನ್ನು ಪ್ರೀತಿಸುವ, ಆಯುರ್ವೇದ ವೈದ್ಯನಾಗಿ ಅನೇಕ ಪವಾಡಗಳನ್ನು ಮಾಡಿ ಜನರ ಕಲ್ಯಾಣಕ್ಕೆ ಶ್ರಮಿಸಿ ಸಾಮರಸ್ಯದ ಬದುಕನ್ನು ಕಟ್ಟಿಕೊಟ್ಟವರು ಎಂದು ಹೇಳಿದರು.

ಸಮಾರಂಭದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ. ಶಶಿಕಾಂತ ಎಸ್ ಉಡಿಕೇರಿ ಅಧ್ಯಕ್ಷತೆ ವಹಿಸಿದ್ದರು. ಸಂತ ಶ್ರೀ ಸೇವಲಾಲ್ ಅಧ್ಯಯನ ಪೀಠದ ನಿರ್ದೇಶಕರಾದ ದಶರಥ ಎಸ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಮುರಾರಿ ಮಹಾರಾಜ್, ಮಾಜಿ ಸಚಿವ ರೇವು ನಾಯಕ್ ಬೆಳಮಗಿ, ಶಾಸಕ ಡಾ. ಅವಿನಾಶ್ ಜಾಧವ್, ಕುಲಸಚಿವ ಡಾ.ನಿಂಗಣ್ಣ ಕೊಣ್ಣೂರ (ಮೌಲ್ಯಮಾಪನ), ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಸಿಂಡಿಕೇಟ್ ಸದಸ್ಯ ಪ್ರೊ .ಹೂವಿನಭಾವಿ ಬಾಬಣ್ಣ ಎಲ್ ಉಪಸ್ಥಿತರಿದ್ದರು. ಸುಭಾಶ್ ರಾಥೋಡ್ ಬಂಜಾರಾ ಗೀತ ಗಾಯನ ಮಾಡಿದರು, ಭುವನೇಶ್ವರಿ ಜಾಧವ್ ಪ್ರಾರ್ಥನಾ ಗೀತೆ ಹಾಡಿದರು, ಮಲ್ಲಿಕಾರ್ಜುನ ಸ್ವಾಗತಿಸಿದರು, ಮಹೇಶ್ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!