ಶಿಕ್ಷಕರ ಬಡ್ತಿ ಪ್ರಕ್ರಿಯೆ ಹಾಗೂ ಹೊಸ ಕಂದಾಯ ತಾಲೂಕುಗಳಲ್ಲಿ ಬಿಇಓ ಕಚೇರಿ ಪ್ರಾರಂಭಿಸುವಂತೆ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಶಾಸಕ ಶರಣಗೌಡ ಕಂದಕೂರ ಪತ್ರ
ನಾಗಾವಿ ಎಕ್ಸಪ್ರೆಸ್
ಗುರುಮಠಕಲ್: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಶಿಕ್ಷಕರ ಬಡ್ತಿ ಪ್ರಕ್ರಿಯೆ ಹಾಗೂ ಹೊಸ ಕಂದಾಯ ತಾಲೂಕುಗಳಲ್ಲಿ ಬಿ.ಇ.ಓ ಕಚೇರಿ ಪ್ರಾರಂಭಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಪತ್ರ ಬರೆದಿದ್ದಾರೆ.
2025ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶವನ್ನು ಗಮನಿಸಿದಾಗ, ತಿಳಿದು ಬರುವುದೇನೆಂದರೆ ಕಲ್ಯಾಣ ಕರ್ನಾಟಕದ ವಿಜಯ ನಗರ ಹೊರತುಪಡಿಸಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳು ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿರುವುದು ಸ್ಪಷ್ಟವಾಗಿದೆ. ಶೈಕ್ಷಣಿಕ ಗುಣಮಟ್ಟದ ಕುಸಿತಕ್ಕೆ ಹಲವಾರು ಕಾರಣಗಳಲ್ಲಿ ಪ್ರಮುಖವಾದ ಕಾರಣ ಶಿಕ್ಷಕರ ಕೊರತೆ. ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಮಂಜೂರಾಗಿರುವ 11793 ಹುದ್ದೆಗಳಲ್ಲಿ 4107 ಹುದ್ದೆಗಳು ಖಾಲಿ ಇರುತ್ತವೆ. ಅದರಲ್ಲಿ ವಿಶೇಷವಾಗಿ ಯಾದಗಿರಿ ಜಿಲ್ಲೆಯಲ್ಲಿ ಶೇ. 50 ರಷ್ಟು ಹುದ್ದೆಗಳು ಖಾಲಿ ಇವೆ. ಅಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾಗಿರುವ 45431 ಹುದ್ದೆಗಳಲ್ಲಿ 17274 ಹುದ್ದೆಗಳು ಅಂದರೆ ಶೇ. 40 ರಷ್ಟು ಹುದ್ದೆಗಳು ಖಾಲಿ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣ ನಿರೀಕ್ಷಿಸುವುದು ಮರಳುಗಾಡಿನಲ್ಲಿ ನೀರು ಬಯಸಿದಷ್ಟೇ ಕಷ್ಟ ಸಾಧ್ಯ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿರವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಯತ್ನಶೀಲರಾಗಿದ್ದಾರೆ. ಆ ಒಂದು ಭಾಗವಾಗಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಬಡ್ತಿಗಾಗಿ ಮೀಸಲಿರುವ ಹುದ್ದೆಗಳನ್ನು ಅರ್ಹ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಭರ್ತಿ ಮಾಡಿಕೊಳ್ಳುವಂತಾಗಲು ವಿಭಾಗದ ಎಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದು ಕ್ರಮವಹಿಸಲು ಸೂಚಿಸಿರುತ್ತಾರೆ. ಈ ಮಧ್ಯೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರು ಪತ್ರ ಏಪ್ರಿಲ್ 16 ರಂದು ಪತ್ರ ಬರೆದು ಬಡ್ತಿ ವಿಷಯವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ತಡೆಹಿಡಿಯುವಂತೆ ಅಪರ ಆಯುಕ್ತರಿಗೆ ನಿರ್ದೇಶಿಸಿರುತ್ತಾರೆ. ಪ್ರಯುಕ್ತ ಕಲ್ಯಾಣ ಕರ್ನಾಟಕ್ಕೆ ಈಗಾಗಲೆ ಸಂವಿಧಾನದ 371(ಜೆ) ಕಲಂ ಜಾರಿಯಲ್ಲಿರುವುದರಿಂದ ವಿಶೇಷ ಪ್ರಕರಣವೆಂದು ಭಾವಿಸಿ ಬಡ್ತಿ ಪ್ರಕ್ರಿಯೆಯನ್ನು ಮುಂದುವರೆಸುವಂತೆ ಅನುಮತಿ ನೀಡುವಂತೆ ಸಂಬಂಧಿತರಿಗೆ ನಿರ್ದೇಶನ ನೀಡುವುದು ಹಾಗೂ ನೇರ ನೇಮಕಾತಿಯಿಂದ ಭರ್ತಿ ಮಾಡಬೇಕಾದ 3313 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೋರಿ ಈಗಾಗಲೇ ಅಪರ ಆಯುಕ್ತರು, ಮಾರ್ಚ್ 14 ರಂದು ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ಅದನ್ನು ಸಹ ಇತ್ಯರ್ಥಗೊಳಿಸುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಯಾದಗಿರಿ ಹಾಗೂ ಗುರುಮಿಠಕಲ್ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡಲು ಕಾರ್ಯಭಾರವು ತುಂಬಾ ಅಧಿಕವಾಗಿರುವದರಿಂದ ತ್ವರಿತವಾಗಿ ಆಡಳಿತ ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗಿದೆ ಈ ಹಿನ್ನಲೆಯಲ್ಲಿ ಅಪರ ಆಯುಕ್ತರು ಕಲಬುರಗಿ ಇವರು ಸರ್ಕಾರ ಸೃಜನೆ ಮಾಡಿರುವ ನೂತನ ಕಂದಾಯ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಪ್ರಾರಂಭಿಸಲು ಸರಕಾರಕ್ಕೆ ಪತ್ರ ವ್ಯವಹಾರ ಮಾಡಿದ್ದು ತಾವುಗಳ ಸರಕಾರದ ಹಂತದಲ್ಲಿ ವಿಶೇಷ ಮುತುವರ್ಜಿವಹಿಸಿ ಗುರುಮಿಠಕಲ್ ತಾಲೂಕಿನಲ್ಲಿ ನೂತನ ಬಿ.ಇ.ಓ ಕಚೇರಿಯನ್ನು ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ತಾವು ಸ್ವತಃ ತುರ್ತಾಗಿ ಮುತುವರ್ಜಿ ವಹಿಸಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಕರ ಬಡ್ತಿ ಪ್ರಕ್ರಿಯನ್ನು ನಡೆಸುವುದರ ಜೊತೆಗೆ ಗುರುಮಿಠಕಲ್ ಹೊಸ ಕಂದಾಯ ತಾಲೂಕಿನಲ್ಲಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿ.ಇ.ಓ) ಕಚೇರಿ ಪ್ರಾರಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಶರಣಗೌಡ ಕಂದಕೂರ ಮನವಿ ಮಾಡಿದ್ದಾರೆ.