ಹಾಲಿನ ದರ ಏರಿಕೆ ಹಿಂಪಡೆಯಲು ಬಾಲರಾಜ್ ಗುತ್ತೇದಾರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತು ಕನಿಕರ ಇದ್ದರೆ, ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ 20 ತಿಂಗಳಲ್ಲಿ ಮೂರು ಬಾರಿ ಹಾಲಿನ ದರವನ್ನು ಏರಿಸಿದ್ದಾರೆ. ಇವರ ಅವಧಿಯಲ್ಲಿ ಒಟ್ಟು ರೂ.9 ಹೆಚ್ಚಿಸಿದಂತಾಗಿದೆ ಎಂದು ಹೇಳಿದ್ದಾರೆ.
2023 ರ ಆಗಸ್ಟ್‌ನಲ್ಲಿ ರೂ.3 ಹೆಚ್ಚಳ ಮಾಡಲಾಗಿತ್ತು, 2024 ರ ಜೂನ್‌ನಲ್ಲಿ ರೂ.2 ಈಗ ರೂ.4 ಏರಿಕೆ ಮಾಡಲಾಗಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬರೆ ಎಳೆದಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
‘ಒಂದು ವೇಳೆ ಗ್ರಾಹಕರ ಮೇಲೆ ಹೊರೆ ಹೊರಿಸುವುದು ಅನಿವಾರ್ಯವಾದರೆ ಹೆಚ್ಚಳ ಮಾಡಿರುವ ರೂ.4 ನೇರವಾಗಿ ಹಾಲು ಉತ್ಪಾದಕರ ಕೈ ಸೇರುವಂತೆ ನೋಡಿಕೊಳ್ಳಿ. ಆಡಳಿತ ವೆಚ್ಚ, ಮತ್ತೊಂದು ವೆಚ್ಚ ಎಂದು ಅತ್ತ ರೈತರಿಗೂ ಲಾಭವಿಲ್ಲದೆ ಇತ್ತ ಗ್ರಾಹಕರ ಜೇಬಿಗೂ ಕತ್ತರಿ ಹಾಕಿದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.