Oplus_0

ಹಲಕರ್ಟಿ ಗ್ರಾಮಕ್ಕೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಹಲಕರ್ಟಿ ಗ್ರಾಮಕ್ಕೆ ಶುದ್ಧವಾದ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಗ್ರಾಮ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಸಮಿತಿ ಅಧ್ಯಕ್ಷ ಭೀಮಪ್ಪ ಮಾಟ್ನಳ್ಳಿ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಕೊರತೆಯು ಜನರ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದು ತಮಗೂ ತಿಳಿದ ವಿಷಯವಾಗಿದೆ. ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯೂ ಪರಿಹಾರವಾಗದೇ ಹಾಗೆಯೇ ಉಳಿದಿದೆ. ಜನರು ಪ್ರತಿಭಟನೆ ಮಾಡಿದಾಗಲೆಲ್ಲ ತಾತ್ಕಾಲಿಕ ಪರಿಹಾರವನ್ನು ಮಾಡಿ ಕೈತೊಳೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಸಮಸ್ಯೆಯನ್ನು ಪ್ರತಿ ದಿನವೂ ಎದುರಿಸುತ್ತಿರುವ ಗ್ರಾಮಸ್ಥರು ಸರ್ಕಾರಕ್ಕೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಬೇಸಿಗೆ ಬಂದರೆ ಸಾಕು ಜನರಿಗೆ ನೀರಿನ ಕೊರತೆಯ ಗೋಳು ತಪ್ಪಿದ್ದಲ್ಲ. ಗ್ರಾಮ ಪಂಚಾಯತಿಯೂ ಸಹ ಜನರ ಈ ಸಮಸ್ಯೆಯನ್ನು ಅರಿತು ಜನರಿಗೆ ನೀರಿನ ಸೌಕರ್ಯವನ್ನು ಒದಗಿಸಿಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಈಗಲಾದರೂ ಬೇಸಿಗೆಯ ಈ ಸಂದರ್ಭದಲ್ಲಿ ಮೊದಲ ಆದ್ಯತೆಯ ಮೇರೆಗೆ ಶುದ್ಧವಾದ ಕುಡಿಯುವ ನೀರನ್ನು ಶಾಶ್ವತವಾಗಿ ಒದಗಿಸಲು ಸೂಕ್ತ ಕ್ರಮ ಕೈಗೊಂಡು ನೀರನ್ನು ಪೂರೈಸಬೇಕು ಮತ್ತು ಬಡಾವಣೆಗಳಲ್ಲಿ ಎಲ್ಲೆಲ್ಲಿ ನೀರಿನ ಪೈಪ್‌ಗಳು ಒಡೆದಿವೆಯೋ ಅಲ್ಲೆಲ್ಲ ದುರಸ್ಥಿ ಕಾಮಗಾರಿಗಳು, ರಿಪೇರಿ ಕೆಲಸಗಳನ್ನು ಮಾಡಬೇಕೆಂದು ಒತ್ತಾಯಿಸಿದರು.

ಒಂದು ವಾರದ ಒಳಗಡೆ ಈ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹಾರ ಮಾಡದಿದ್ದಲ್ಲಿ ನಂತರದ ದಿನಗಳಲ್ಲಿ ಉನ್ನತ ಹಂತದ ಹೋರಾಟವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ವಾರ್ಡ್ ನಂ.1 ಮತ್ತು ವಾರ್ಡ್ ನಂ.2 ರಲ್ಲಿ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಶ್ವತವಾಗಿ ಮಾಡಲು ಕ್ರಮ ಕೈಗೊಳ್ಳಬೇಕು, ಮೊದಲ ಆದ್ಯತೆಯ ಮೇರೆಗೆ ಕೂಡಲೇ ಶುದ್ಧವಾದ ನೀರನ್ನು ಪೂರೈಸಬೇಕು, ಗ್ರಾಮದ ಬಡಾವಣೆಗಳಲ್ಲಿ ಎಲ್ಲೆಲ್ಲಿ ನೀರಿನ ಪೈಪ್ ಒಡೆದಿದೆಯೋ ಅಲ್ಲೆಲ್ಲಾ ಕೂಡಲೇ ದುರಸ್ಥಿ ಕಾಮಗಾರಿಗಳನ್ನು ಮತ್ತು ರಿಪೇರಿ ಕೆಲಸಗಳನ್ನು ಕೂಡಲೇ ಕೈಗೊಳ್ಳಬೇಕೆಂಬ ಬೇಡಿಕೆಗಳ ಮನವಿ ಪತ್ರವನ್ನು ಸಮಿತಿ ಕಾರ್ಯದರ್ಶಿ ಸಾಬಣ್ಣ ಸುಣಗಾರ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!