ಕಲಬುರಗಿ ರೊಟ್ಟಿ ವಿದೇಶಕ್ಕೆ ರಫ್ತು, ಇದು ಹೆಮ್ಮೆಯ ವಿಷಯ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸ್ಥಳೀಯವಾಗಿ ಸ್ವಸಹಾಯ ಸಂಘಗಳ ಮೂಲಕ ತಯಾರಿಸುವ ಕಲಬುರಗಿ ರೊಟ್ಟಿ ಇದೀಗ ವಿದೇಶದಲ್ಲಿ ಲಭ್ಯವಾಗುತ್ತಿದೆ. ಒಂದುವರೆ ವರ್ಷದಲ್ಲೇ ಕಲಬುರಗಿ ರೊಟ್ಟಿ ವಿದೇಶಿ ಮಾರುಕಟ್ಟೆಯಲ್ಲಿ ಸಿಗುವಂತೆ ಕ್ರಮವಹಿಸಲಾಗಿದ್ದು ಇದು ಹೆಮ್ಮೆಯ ವಿಷಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಅರಿವಿನ ಮನೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ, ಅಮೇರಿಕಾ ಹಾಗೂ ಕೆನಡ ದೇಶಗಳಿಗೆ ರಫ್ತು ಮಾಡಲು ತಯಾರಿಸಿದ ಬಾಕ್ಸ್ ಗಳಿಗೆ ಹಸಿರು ನಿಶಾನೆ ತೋರಿಸಿ, ಅಂಚೆ ಮೂಲಕ ವಿದೇಶಕ್ಕೆ ಅಂಚೆ ಮೂಲಕ ರಫ್ತು ಮಾಡಲು ಅಂಚೆ ಸಿಬ್ಬಂದಿಗೆ ಹಸ್ತಾಂತರ ಮಾಡಿ ಅವರು ಮಾತಮಾಡುತ್ತಿದ್ದರು.
ಕಳೆದ ಒಂದುವರೆ ವರ್ಷದ ಹಿಂದೆ “ಕಲಬುರಗಿ ರೊಟ್ಟಿ ” ಹೆಸರಿನಲ್ಲಿ ಬ್ರ್ಯಾಂಡ್ 100 ರೊಟ್ಟಿ ಸ್ವಸಹಾಯ ಸಂಘಗಳ ಮೂಲಕ ಒಟ್ಟು 1000 ಮಹಿಳೆಯರು ರೊಟ್ಟಿ ತಯಾರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಲಬುರಗಿ ರೊಟ್ಟಿ ಪುಣೆ ಮೂಲದ ರಫ್ತು ಕಂಪನಿಯ ಮೂಲಕ ಅಮೇರಿಕಾ, ಕೆನಡಾ ಹಾಗೂ ಆಸ್ಟ್ರೇಲಿಯಾಗಳಿಗೆ ರಫ್ತು ಮಾಡಲು ಕ್ರಮವಹಿಸಲಾಗಿದೆ. ಇದು ನಮ್ಮ ಕಲಬುರಗಿಯ ಹೆಮ್ಮೆಯ ವಿಷಯವಾಗಿದೆ ಎಂದರು.
ವಿದೇಶಗಳಿಗೆ ರಫ್ತು ಮಾಡಲು ತಯಾರಿಸಿದ ಪ್ಯಾಕ್ ಗಳನ್ನು ಹಾಗೂ ಭಾರತೀಯ ಅಂಚೆ ಮೂಲಕವೂ ಕಳಿಸಲು ತಯಾರಿಸಿ ಪ್ಯಾಕ್ ಗಳಿಗೆ ಸಚಿವರು ಹಸಿರು ನಿಶಾನೆ ತೋರಿಸಿದರು. ಪ್ರತಿ ತಿಂಗಳು ಅಮೇರಿಕಾ ಹಾಗೂ ಆಸ್ಟ್ರೇಲಿಯಾ ಗೆ ತಲಾ 10,000 ಹಾಗೂ ಕೆನಡಾ ದೇಶಕ್ಕೆ 5000 ಕಲಬುರಗಿ ಜೋಳದ ರೊಟ್ಟಿ ರಫ್ತು ಮಾಡಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ತಿಳಿಸಿದರು.
ಕಲಬುರಗಿ ರೊಟ್ಟಿ ಟಿಪ್ಪಣಿ:
ಕಲಬುರಗಿ ರೊಟ್ಟಿಯನ್ನು “ಕಲಬುರಗಿ ರೊಟ್ಟಿ” ಬ್ರಾಂಡ್ ಮೂಲಕ ಅಮೇಜಾನ್, ಕಲಬುರಗಿ ರೊಟ್ಟಿ ವೆಬ್ ಸೈಟ್, ಪ್ರಾಂಚೈಸಿ ಹಾಗೂ ಲೋಕಲ್ ಮಾರ್ಕೆಟ್ ಮೂಲಕ ಮಾರಾಟ ಮಾಡಲಾಗುತ್ತಿದೆ.
ಕಲಬುರಗಿ ರೊಟ್ಟಿ ಬ್ರ್ಯಾಂಡ್ ನಲ್ಲಿ 100 ಕ್ಕಿಂತ ಹೆಚ್ಚು ಸ್ವಸಹಾಯ ಸಂಘಗಳು ಹಾಗೂ 1000 ಕ್ಕಿಂತ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಕಲಬುರಗಿ ರೊಟ್ಟಿ ಉತ್ಪಾದನೆ ಮಾಡುವ ಮಹಿಳೆಯರು ಪ್ರತಿ ತಿಂಗಳು 15 ರಿಂದ 20 ಸಾವಿರ ರೂಪಾಯಿವರೆಗೂ ಆದಾಯ ಗಳಿಸುತ್ತಿದ್ದು, ಮದುವೆ ಹಾಗೂ ಇತರೆ ಸಮಾರಂಭಗಳಿಂದ ಹೆಚ್ಚು ಆಧಾಯಗಳಿಸುತ್ತಿದ್ದಾರೆ.
ಕಲಬುರಗಿ ರೊಟ್ಟಿಯನ್ನು ದೇಶದ ಎಲ್ಲಾ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದು, ವಿದೇಶಗಳಿಗೆ ಕಳುಹಿಸುವ ಪ್ರಯತ್ನ ಫಲಕಾರಿಯಾಗಿದೆ.
ಕಲಬುರಗಿ ರೊಟ್ಟಿಯನ್ನು ವಿದೇಶಗಳಿಗೆ (ಆಸ್ಟ್ರೇಲಿಯಾ, ಕೆನಡಾ ಹಾಗೂ ಯು.ಎಸ್.ಎ) ರಫ್ತು ಮಾಡಲು ಪುಣೆ ಮೂಲದ ಅಶ್ತಮ್ ಟ್ರೇಡರ್ಸ್ ರವರೊಂದಿಗೆ ಮಾತುಕತೆ ನಡೆದಿದ್ದು, ಮೊದಲ ಹಂತದಲ್ಲಿ ಒಂದು ವರ್ಷಕ್ಕೆ ಒಂದು ಲಕ್ಷ ರೊಟ್ಟಿಗಳನ್ನು ಆಸ್ಟ್ರೇಲಿಯಾ ಹಾಗೂ ಯು.ಎಸ್.ಎ ಗೆ ರಫ್ತು ಮಾಡಲಾಗುವುದು.
ಪ್ರತಿ ತಿಂಗಳು 10,000-25,000 ರೊಟ್ಟಿಗಳನ್ನು ರಫ್ತು ಮಾಡಲಾಗುವುದು. ಈಗಾಗಲೇ ಜಿಲ್ಲಾಢಳಿತದಿಂದ ಆಶ್ತಮ್ ಟ್ರೇಡರ್ ರವರೊಂದಿಗೆ ಒಪ್ಪಂದ ಸಿದ್ಧಪಡಿಸಲಾಗಿದೆ.
ಇದರಿಂದಾಗಿ ಕಲಬುರಗಿ ರೊಟ್ಟಿ ಉತ್ಪಾದಕರಿಗೆ ಹೆಚ್ಚಿನ ಆದಾಯ ಸಿಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ರೊಟ್ಟಿಗೆ ರೂ. 10/- -12/- ಬೆಲೆ ಇದ್ದು, ಈ Export ನಿಂದಾಗಿ ವಿದೇಶದಲ್ಲಿ ಒಂದು ರೊಟ್ಟಿಗೆ ರೂ. 25/- – 30/- ರೂ ಬೆಲೆ ಸಿಗಲಿದ್ದು, ಶೇ80%-100 % ಹೆಚ್ಚಿನ ಆದಾಯ ಕಲಬುರಗಿ ರೊಟ್ಟಿ ಉತ್ಪಾದಕರಿಗೆ (ಮಹಿಳೆಯರಿಗೆ) ದೊರಕಲಿದೆ.
ಕಲಬುರಗಿ ರೊಟ್ಟಿ ಉತ್ಪಾದನೆಯ ಜೊತೆಗೆ ಗಾಳಿಯೊಂದಿಗೆ ಬಿಗಿಯಾದ ಪ್ಯಾಕ್ ಮಾಡುವ ಯಂತ್ರವನ್ನು ಖರೀದಿಸಲು HDFC ಬ್ಯಾಂಕ್ ನ CSR ಅನುದಾನದಲ್ಲಿ ರೂ. 55 ಲಕ್ಷ ಒದಗಿಸಿದ್ದು, ಅದಕ್ಕೆ ಬೇಕಾಗುವ ಮೂಲಭೂತ ಸೌಲಭ್ಯವನ್ನು DMF ಯೋಜನೆಯಡಿ ರೂ. 32 ಲಕ್ಷ ವೆಚ್ಚದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕೊಟನೂರ (ಡಿ), ಕಲಬುರಗಿ ನಲ್ಲಿ ಸಿದ್ಧವಾಗುತ್ತಿದೆ.
ಸದರಿ ಘಟಕ ಸಿದ್ಧವಾದ ನಂತರ ಕಲಬುರಗಿ ರೊಟ್ಟಿ ರಫ್ತು ಮಾಡಲು ಹೆಚ್ಚು ಪ್ರೋತ್ಸಾಹ ದೊರಕಲಿದೆ, ಅಲ್ಲದೆ ಕಲಬುರಗಿ ರೊಟ್ಟಿಯ ಗುಣಮಟ್ಟ ಹೆಚ್ಚಾಗಲಿದೆ. ಕೆಲವೇ ದಿವಸಗಳಲ್ಲಿ ಪ್ಯಾಕ್ ಮಾಡುವ ಮಷೀನ್ ಫಟಕವನ್ನು ಉದ್ಘಾಟಿಸಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ರೊಟ್ಟಿ ತಯಾರಿಕರ ಸಂಘದ ಸದಸ್ಯರಾದ ಶರಣಮ್ಮ ಪಾಟೀಲ್, ತಮಗೆ ಸಾಕಷ್ಟು ಸಹಾಯ ಮಾಡಿದ್ದಾಗಿ ಹೇಳಿ, ರೊಟ್ಟಿ ತಯಾರಿಕೆಗೆ ಜಿಲ್ಲಾಡಳಿತದ ಸಹಕಾರ ಸ್ಮರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಜೆಸ್ಕಾಂ ಚೇರ್ ಮನ್ ಪ್ರವೀಣ್ ಹರವಾಳ, ಕುಡಾ ಅಧ್ಯಕ್ಷ ಮಹಜರ್ ಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ ಶಿಂಧೆ, ಸುಮಿತ್ ಪಾಟೀಲ್ ಸೇರಿದಂತೆ ಹಲವರಿದ್ದರು.

