ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದಲ್ಲಿ ಸಮಾರೋಪ ಸಮಾರಂಭ, ಸಮಾನತೆ, ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅಂಬೇಡ್ಕರ್ ಮಹಾನ್ ವ್ಯಕ್ತಿ: ಅಲ್ಲಮಪ್ರಭು ಪಾಟೀಲ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಮನುಷ್ಯರನ್ನು ಮನುಷ್ಯರಂತೆ ಕಾಣದ ಭಾರತದಲ್ಲಿ ಬದುಕಿನ ಕಷ್ಟ, ನಷ್ಟಗಳನ್ನು ಎದುರಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು, ಸಮಾನತೆ, ಸ್ವಾತಂತ್ರ್ಯಕ್ಕಾಗಿ ಬಡಿದಾಡಿದ ಮಹಾನ್ ವ್ಯಕ್ತಿ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ದಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು, ಎನ್.ಎಸ್.ಎಸ್, ಎನ್.ಸಿ.ಸಿ, ರೇಂಜರ್ಸ್, ರೋವರ್ಸ್, ರೆಡ್ ಕ್ರಾಸ್, ರೆಡ್ ರಿಬ್ಬನ್ ಘಟಕಗಳು ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಧ್ಯಾರ್ಥಿಗಳು ವಿದ್ಯೆಯ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಚಿಗರಳ್ಳಿ ಮರುಳಶಂಕರ ದೇವರ ಮಠದ ಸಿದ್ಧಬಸವ ಕಬೀರ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಮಕ್ಕಳ ಭವಿಷ್ಯ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳ ಆಯ್ಕೆ ಕ್ರಮಬದ್ಧವಾಗಿದ್ದು, ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದ ಮೂಲಕ ಏನನ್ನಾದರೂ ಸಾಧಿಸಬಹುದು ಎಂದು ನುಡಿದರು.
ಜಾತಿ, ಮತ, ಪಂಥಕ್ಕಿಂತ ದೇಶ ಮುಖ್ಯ. ಕಷ್ಟದಲ್ಲಿ ಇರುವವರಿಗೆ ಕಣ್ಣೀರು ಒರೆಸುವುದೇ ನಿಜವಾದ ಧರ್ಮ. ಬುದ್ಧ, ಬಸವ, ಅಂಬೇಡ್ಕರ್ ತತ್ವಗಳು ಪರಿವರ್ತನೆ ಹಾಗೂ ಅಭಿವೃದ್ಧಿಗೆ ದಾರಿಯಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಲೇಖಕ ಡಾ. ಶಿವರಂಜನ ಸತ್ಯಂಪೇಟೆ, ಬೌದ್ಧ ಚಿಂತಕ ಮಿಲಿಂದ ಗುರೂಜಿ ಮಾತನಾಡಿ, ದೇಶದ ಪ್ರಗತಿಗೆ ಶಿಕ್ಷಣ ಮುಖ್ಯ. ಶಿಕ್ಷಣ ಬಾಹ್ಯವಾಗಿ ಮಾತ್ರವಲ್ಲದೆ ಆಂತರಿಕವಾಗಿ ಆತ್ಮವಿಶ್ವಾಸ ಹೆಚ್ಚಿಸಿ ಆತ್ಮಜ್ಞಾನಕ್ಕೆ ದಾರಿ ಮಾಡಿಕೊಡಬೇಕು. ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದು ಹೇಳಿದರು.
ಪ್ರಾಚಾರ್ಯೆ ಡಾ. ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಟಿ.ವಿ. ಅಡಿವೇಶ, ಡಾ. ವಿಜಯಕುಮಾರ ಸಾಲಿ, ಡಾ. ದವಲಪ್ಪ ಎಚ್, ಡಾ. ಅರುಣಕುಮಾರ ಸಲಗರ, ಡಾ. ರಾಜಶೇಖರ ಮಡಿವಾಳ, ವಿಜಯಲಕ್ಷ್ಮೀ, ಶಿವಾನಂದ ಸ್ವಾಮಿ, ಡಾ. ನಾಗಪ್ಪ ಗೋಗಿ ವೇದಿಕೆಯಲ್ಲಿದ್ದರು.
ಇದೇ ವೇಳೆಯಲ್ಲಿ ಕ್ರೀಡಾಕೂಟ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಹಾಗೂ ಪ್ರಶಸ್ತಿ ಪಡೆದ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.
ಡಾ. ಬಲಭೀಮ ಸಾಂಗ್ಲಿ ನಿರೂಪಿಸಿದರು. ಡಾ. ರಾಜಕುಮಾರ ಸಲಗರ ಸ್ವಾಗತಿಸಿದರು. ಡಾ. ಶ್ರೀಮಂತ ಹೋಳಕರ ಪ್ರಾಸ್ತಾವಿಕ ಮಾತನಾಡಿದರು. ಸಿದ್ಧಾರ್ಥ ಚಿಮ್ಮಾ ಇದಲಾಯಿ ಪ್ರಾರ್ಥನೆಗೀತೆ ಹಾಡಿದರು. ಡಾ. ವಿಶ್ವನಾಥ ಬೆಣ್ಣೂರ, ಡಾ. ಸುರೇಶ ಎಸ್. ಮಾಳೆಗಾಂವ, ಡಾ. ನಾಗಜ್ಯೋತಿ, ಡಾ. ಶ್ಯಾಮಲಾ ಸ್ವಾಮಿ, ಡಾ. ನಿವೇದಿತಾ ಸ್ವಾಮಿ, ಈರಮ್ಮ ಪಾಟೀಲ, ಡಾ. ರಮೇಶ ಪೋತೆ, ಡಾ. ಸುರೇಂದ್ರ ಕೆರಮಗಿ ಇತರರು ಭಾಗವಹಿಸಿದ್ದರು.