ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ | ಅದ್ದೂರಿಯಾಗಿ ಆಚರಣೆಗೆ ತಾಲೂಕು ಆಡಳಿತ ಸಿದ್ದ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕನ್ನಡಪರ ಹೋರಾಟಗಾರರ ಹಾಗೂ ಸಾಹಿತಿಗಳ ಅಭಿಪ್ರಾಯದ ಮೇರೆಗೆ ಕರ್ನಾಟಕ ರಾಜ್ಯೋತ್ಸವ ಈ ಬಾರಿ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆಗೆ ತಾಲೂಕು ಆಡಳಿತ ಸಿದ್ದವಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪ್ರಜಾ ಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಮಟ್ಟದ ಕಚೇರಿಗಳಲ್ಲಿ ಕಡ್ಡಾಯವಾಗಿ ಬೆಳಿಗ್ಗೆ 8.30 ಕ್ಕೆ ರಾಷ್ಟ್ರ ಧ್ವಜಾರೋಹಣ ಮುಗಿಸಿಕೊಂಡು 9 ಗಂಟೆಗೆ ಪ್ರಜಾ ಸೌಧ ಆವರಣದಲ್ಲಿ ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಬೇಕು ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯುವ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಂದು ಸೂಚಿಸಿದರು.
ರೈಲ್ವೆ ಹಾಗೂ ಬ್ಯಾಂಕ್ ಗಳಲ್ಲಿ ಧ್ವಜಾರೋಹಣ ಮಾಡುವಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡಲು ಪಿಡಿಒ ಹಾಗೂ ಚಿತ್ತಾಪುರ ಹಾಗೂ ವಾಡಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ಕನ್ನಡ ಸಾಹಿತ್ಯ ಹಾಗೂ ಕನ್ನಡ ನಾಡು ನುಡಿ ಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರನ್ನು ಗೌರವಿಸಲಾಗುವುದು ಎಂದು ಹೇಳಿದರು.
ಅದ್ದೂರಿ ಮೆರವಣಿಗೆಗೆ ಬೇಕಾದ ಕನ್ನಡದ ಬಾವುಟ ಹಾಗೂ ಧ್ವಜಗಳ ವ್ಯವಸ್ಥೆ ಮಾಡಲಾಗುವುದು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಭಾಗವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಕರವೇ ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ರಾಜ್ಯೋತ್ಸವ ಹಬ್ಬದಂತೆ ಆಚರಿಸಬೇಕು ಈ ನಿಟ್ಟಿನಲ್ಲಿ ಮೆರವಣಿಗೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಭಾವಚಿತ್ರಗಳ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕಗಳು ಅಳವಡಿಸಬೇಕು ಎಂದು ಎರಡು ವರ್ಷಗಳಿಂದ ಎರಡು ಬಾರಿ ಮನವಿ ಪತ್ರ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಠಕಲ್ ಮಾತನಾಡಿ, ಎಲ್ಲ ಪತ್ರವ್ಯವಹಾರ ಕನ್ನಡದಲ್ಲಿಯೇ ಆಗಬೇಕು ಹಾಗೂ ಎಲ್ಲಾ ಅಂಗಡಿಗಳ ಮೇಲೆ ಕನ್ನಡ ನಾಮಫಲಕ ಇರಬೇಕು ಎಂದು ಸರ್ಕಾರದ ಆದೇಶ ಇದೆ ಹೀಗಾಗಿ ತಾಲೂಕು ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡು ಜನರಲ್ಲಿ ಕನ್ನಡದ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ವಿಶೇಷವಾಗಿ ರೈಲ್ವೆ, ಸಿಮೆಂಟ್ ಕಂಪನಿಗಳಲ್ಲಿ ಹಾಗೂ ಬ್ಯಾಂಕ್ ಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ಮಾಡುವುದಿಲ್ಲ ಈ ಬಗ್ಗೆ ಗಮನ ಹರಿಸಿ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದು ಮನವಿ ಮಾಡಿದರು. ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಕ್ರಮ ವಹಿಸಬೇಕು ಎಂದು ಹೇಳಿದರು.
ನರಹರಿ ಕುಲಕರ್ಣಿ ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ಯಶಸ್ವಿಗೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ ಮಾತನಾಡಿ, ಮೆರವಣಿಗೆಯಲ್ಲಿ ಕನ್ನಡದ ಬಾವುಟಗಳು ಹಾಗೂ ಧ್ವಜಗಳು ಹೆಚ್ಚಾಗಿ ಕಾಣಬೇಕು ಒಟ್ಟಾರೆ ಯಶಸ್ವಿಯಾಗಿ ನಡೆಯಬೇಕು, ಅಹಿತಕರ ಘಟನೆ ಆಗದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಶರಣಪ್ಪ ಅಬ್ಬಿಗೇರಿ, ಅರಣ್ಯ ಇಲಾಖೆಯ ಜಾವೀದ್, ವಿಠಲ್ ರಾವ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

