ಕೇಂದ್ರ ಬಜೆಟ್ ಬರೀ ಘೋಷಣೆಗೆ ಸಿಮೀತ ಅನುಷ್ಠಾನಕ್ಕೆ ಬರಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೇಂದ್ರ ಸರ್ಕಾರದ ಇಂತಹ ಹತ್ತು ಬಜೆಟ್ ನೋಡಿದ್ದೇವೆ. ಎಲ್ಲ ಬಜೆಟ್‌ನಲ್ಲಿಯೂ ಘೋಷಣೆಗಳು ಮಾತ್ರವೇ ಇರುತ್ತವೆಯೇ ಹೊರತು, ಅದರಲ್ಲಿ ಜನರಿಗೆ ಗಣನೀಯವಾಗಿ ಅನುಕೂಲ ಆಗುವಂತಹದ್ದು ಇಲ್ಲ. ಕಾರ್ಮಿಕರು, ಮಹಿಳೆಯರು, ಯುವಕರಿಗೆ, ಆದಾಯ ತೆರಿಗೆ ಪಾವತಿದಾರರು, ಎಸ್‌ಎಂಇ, ಎಂಎಸ್‌ಎಂಇ, ನವೋದ್ಯಮಿಗಳಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಮಂಡನೆಯಾದ ಕೇಂದ್ರ ಬಜೆಟ್ ಕುರಿತ ಪ್ರತಿಕ್ರಿಯೆ ನೀಡಿದ ಅವರು, ಆದಾಯ ತೆರಿಗೆ ಸ್ಲ್ಯಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಜಿಎಸ್‌ಟಿ ಬಗ್ಗೆ, ಆದಾಯ ತೆರಿಗೆ ಬಗ್ಗೆಯೂ ಹೀಗೆ ಮಾತನಾಡಿದ್ದರು. ಈವರೆಗೂ ಅವರು ಟ್ಯಾಕ್ಸೇಷನ್ ಪದ್ಧತಿಯನ್ನು ಸರಿಯಾಗಿ ಅಳವಡಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.
ಕೇಂದ್ರದ ಯಾವ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆ? ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯಲ್ಲಿ 9 ವರ್ಷದ ಹಿಂದೆ ₹20 ಸಾವಿರ ಘೋಷಣೆ ಮಾಡಿ ಈವರೆಗೂ ಕೊಟ್ಟಿದ್ದು ₹454 ಕೋಟಿ ರೂ ಅಷ್ಟೆ. ಅವರು ಅಲಂಕಾರಿಕ ಪದಗಳನ್ನು ಬಳಸಿ ಘೋಷಣೆಗಳನ್ನು ಮಾಡುವುದರಲ್ಲಿ ಮುಂದಿದ್ದಾರೆ. ಆದರೆ ಬೇರು ಮಟ್ಟದಲ್ಲಿ ಅನುಷ್ಠಾನ ಶೂನ್ಯ ಎಂದಿದ್ದಾರೆ.
ಅವರ ಬಳಿ ದುಡ್ಡಿಲ್ಲ. ಕರ್ನಾಟಕದಲ್ಲಿ ಜಲಜೀವನ್ ಮಿಷನ್‌ನಲ್ಲಿ ₹3500 ಕೋಟಿ ಕೊಡಬೇಕು. ಆದರೆ ನೀಡಿರುವುದು ₹500 ಕೋಟಿ ಮಾತ್ರ. ನಾವು ಕೇಳಿದಾಗ, ನಮ್ಮ ಬಳಿ ದುಡ್ಡಿಲ್ಲ ಎನ್ನುತ್ತಾರೆ. ಕೆಲಸ ನಿಲ್ಲಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ನಿಭಾಯಿಸುತ್ತಿದೆ. ಉಳಿದ ₹3000 ಕೋಟಿ ಮೊತ್ತವನ್ನು ನಾವೇ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗೆ ಸೀಮಿತವಾಗಿದೆ. ಆದರೆ ಅವುಗಳ ಪರಿಪೂರ್ಣ ಅನುಷ್ಠಾನ ಎಂದಿಗೂ ನಡೆದಿಲ್ಲ ಎಂದು ತಿಳಿಸಿದ್ದಾರೆ.