Oplus_0

ಕೋಲಿ‌ ಸಮಾಜದ ತಾಲೂಕು ಘಟಕ, ನಗರ ಘಟಕದ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳಾಗುವವರು ನ.28 ರಿಂದ ಡಿ.5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ, ರಾಜಕೀಯ ಪಕ್ಷಪಾತ ಬದಿಗಿಟ್ಟು ಸಮಾಜದ ಸಂಘಟನೆಗೆ ಮುಂದಾಗಲು ಸಾಲಿ ಕರೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಕೋಲಿ ಸಮಾಜವನ್ನು ಪಕ್ಷಾತೀತವಾಗಿ ಸಂಘಟನೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಸಂಘಟನೆ ಸಶಕ್ತವಾದಾಗ ಸಮಾಜಕ್ಕೆ ನ್ಯಾಯ, ಹಕ್ಕು, ಸೌಲಭ್ಯ, ಸ್ಥಾನಮಾನ ಪಡೆಯಲು ಅನುಕೂಲವಾಗುತ್ತದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ  ನಡೆದ ಕೋಲಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಸಂಘಟನೆ ಬಲಗೊಂಡಾಗ ಮಾತ್ರ ಸಮಾಜಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಸಮಾಜದ ಪ್ರತಿಯೊಬ್ಬರೂ ರಾಜಕೀಯ ಪಕ್ಷಪಾತ ಬದಿಗಿಟ್ಟು ಸಮಾಜದ ಸಂಘಟನೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

ಕೋಲಿ ಸಮಾಜದ ಪದಾಧಿಕಾರಿಗಳ ಅಧಿಕಾರವಧಿ ಮುಗಿದು ಅಧ್ಯಕ್ಷರು ರಾಜೀನಾಮೆ ನೀಡಿ ಎಲ್ಲಾ ಘಟಕಗಳನ್ನು ವಿಸರ್ಜಿಸಿದ್ದರಿಂದ ಹೊಸ ಪದಾಧಿಕಾರಿ ಆಯ್ಕೆ ಮಾಡಬೇಕಿದೆ. ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ಮಾಡಲಾಗುವುದು. ಕೆಲವು ಮಾನದಂಡ ಅನುಸರಿಸುವುದು ಅವಶ್ಯಕ. ತಾಲೂಕು ಘಟಕದ ಮತ್ತು ನಗರ ಘಟಕದ ಅಧ್ಯಕ್ಷರ ಆಯ್ಕೆ ನಂತರ ಅವರ ನೇತೃತ್ವದಲ್ಲಿಯೆ ಯುವ ಘಟಕದ ಮತ್ತು ಮಹಿಳಾ ಘಟಕದ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ. ಸಮಾಜದ ಜನರು ಸಹಕರಿಸಬೇಕು ಮತ್ತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಅಧ್ಯಕ್ಷ ರಾಮಲಿಂಗ ಬಾನರ್, ಮಾಜಿ ಗೌರವಾಧ್ಯಕ್ಷ ಹಣಮಂತ ಸಂಕನೂರು, ಮುಖಂಡರಾದ ಮಲ್ಲಿಕಾರ್ಜುನ ಎಮ್ಮೆನೋರ್, ಭೀಮಣ್ಣಾ ಹೋತಿನಮಡಿ, ನಿಂಗಣ್ಣಾ ಹೆಗಲೇರಿ, ಸುರೇಶ ಬೆನಕನಳ್ಳಿ, ಮಲ್ಲಿಕಾರ್ಜುನ ಸಂಗಾವಿ, ಹಣಮಂತ ಕಟ್ಟಿ, ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ, ಲಕ್ಷ್ಮಿಕಾಂತ ಸಾಲಿ, ಕರಣಕುಮಾರ ಅಲ್ಲೂರ್, ಚಂದ್ರು ಕಾಳಗಿ, ಪ್ರಭು ಹಲಕರ್ಟಿ, ಮಹಾದೇವ ಇಟಗಾ  ಇದ್ದರು.

ಪದಾಧಿಕಾರಿ ಆಯ್ಕೆಗೆ ಮಾನದಂಡ: ಕೋಲಿ ಸಮಾಜದ ತಾಲೂಕು ಘಟಕದ ಹಾಗೂ ನಗರ ಘಟಕದ ಅಧ್ಯಕ್ಷರ ಹುದ್ದೆಗೆ ಆಕಾಂಕ್ಷಿಗಳಾಗುವವರು 40 ರಿಂದ 60 ವರ್ಷದವರಾಗಿರಬೇಕು. ಯುವ ಘಟಕದ ಅಧ್ಯಕ್ಷ ಹುದ್ದೆಗೆ ಅಕಾಂಕ್ಷಿಗಳಾಗುವವರು 30 ರಿಂದ 40 ವರ್ಷದವರಾಗಿರಬೇಕು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ, ಸಮಾಜದ ಮಾಜಿ ಅಧ್ಯಕ್ಷ ರಾಮಲಿಂಗ ಬಾನರ್ ಅವರು ಜಂಟಿಯಾಗಿ ತಿಳಿಸಿದ್ದಾರೆ.

ಪದಾಧಿಕಾರಿಗಳ ಆಯ್ಕೆ ಸಂಬಂಧ ನಡೆದ ಮುಖಂಡರ ಸಭೆಯಲ್ಲಿ ಕೂಲಂಕೂಷವಾಗಿ ಚರ್ಚೆ ನಡೆಸಿ ಕೆಲವು ಮಾನದಂಡ ಅನುಸರಿಸಲೇಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಸಮಾಜದ ತಾಲೂಕು ಘಟಕ, ನಗರ ಘಟಕದ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳಾಗುವವರು ನ.28 ರಿಂದ ಡಿ.5 ರವರೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕರಣಕುಮಾರ ಅಲ್ಲೂರ್ ಅವರ ಹತ್ತಿರ ನಿಗಧಿತ ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದವರ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎಂದು ತಾಲೂಕಿನ ಸಮಾಜದ ಹಿರಿಯ ಮುಖಂಡರು ಪರಾಮರ್ಶೆ ನಡೆಸಿ ತೀರ್ಮಾನ ಮಾಡಲಾಗುತ್ತದೆ. ಪದಾಧಿಕಾರಿ ಆಯ್ಕೆ ಸಂಬಂಧ ಅರ್ಜಿ ಸಲ್ಲಿಸಿದವರು ತಮ್ಮನ್ನು ಹೊರತುಪಡಿಸಿ ಬೇರೆಯವರ ಹೆಸರು ಹೇಳಲು ಅವಕಾಶವಿರುವುದಿಲ್ಲ. ಯಾವುದೇ ರೀತಿಯ ಗುಂಪುಗಾರಿಕೆ ಯಾರೂ ಮಾಡಬಾರದು. ಸಮಾಜದ ಸಂಘಟನೆಗೆ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!