ಚಿತ್ತಾಪುರ ಕೊತಲಾಪೂರ ಯಲ್ಲಮ್ಮ ದೇವಸ್ಥಾನ ಕಳವು, ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ಪರಿಶೀಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಾಹರಪೇಟ್ ಏರಿಯಾದ ಕೊತಲಾಪೂರ ಯಲ್ಲಮ್ಮ ದೇವಸ್ಥಾನದ ಕೀಲಿಕೈ ಮುರಿದು ಒಳಗಡೆಯ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಕಟ್ ಮಾಡಿ ತೆಗೆದುಕೊಂಡು ಹೋದ ಕಳ್ಳತನ ಪ್ರಕರಣ ಬುಧವಾರ ಬೆಳಕಿಗೆ ಬರುತ್ತಿದ್ದಂತೆ ಪಟ್ಟಣದಲ್ಲಿ ತೀವ್ರ ಚರ್ಚೆಗೆ ಹಾಗೂ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಪಿಎಸ್ಐ ಶ್ರೀಶೈಲ್ ಅಂಬಾಟಿ ಭೇಟಿ ನೀಡಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಜಿಲ್ಲೆಯಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಪಿಎಸ್ಐ ಶ್ರೀಶೈಲ್ ಅಂಬಾಟಿ, ಇದರ ಬಗ್ಗೆ ಗೊತ್ತಿದ್ದವರೇ ಹಾಗೂ ಪೂರ್ವಯೋಜಿತ ಮಾಡಿಕೊಂಡು ಈ ಕಳ್ಳತನ ಮಾಡಿದ್ದಾರೆ. ಕಳ್ಳರು ಯಾವುದೇ ಸುಳಿವು ಬಿಟ್ಟಿಲ್ಲ, ಆದರೂ ಈಗಾಗಲೇ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಪರಿಶೀಲನೆ ನಡೆಸಿದ್ದಾರೆ, ಇದರ ಆಧಾರದ ಮೇಲೆ ಕೂಡಲೇ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ದಸರಾ ನವರಾತ್ರಿ ಉತ್ಸವದ ಸಮಯದಲ್ಲಿ ಯಲ್ಲಮ್ಮ ದೇವಸ್ಥಾನದ ಗೇಟ್ ಗೆ ಹಾಕಿದ ಕೀಲಿಕೈ ಮುರಿದು ಒಳಗಡೆ ಇರುವ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಕಟ್ ಮಾಡಿ ಕಳ್ಳತನ ಆಗಿರುವುದು ಕಂಡುಬಂದಿದೆ ಅಲ್ಲದೇ ಬೆಳ್ಳಿಯ ಕಣ್ಣು ಬಟ್ಟು ಹಾಗೂ ಪಾದುಕೆ, ತಾಟ್ ಸಹ ಕಳ್ಳತನ ಆಗಿದೆ ಅಷ್ಟೇ ಅಲ್ಲದೇ ಮೂರ್ತಿಯನ್ನೇ ಕಳ್ಳತನ ಮಾಡುವ ಪ್ರಯತ್ನ ನಡೆದಿದೆ.
ಪೊಲೀಸ್ ಅಧಿಕಾರಿಗಳು ಈ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಮೇಶ್ ಬೊಮ್ಮನಳ್ಳಿ, ಮುಖಂಡ ಕುನಾಲ್ ತುರೆ ಸೇರಿದಂತೆ ಸಾರ್ವಜನಿಕರು ಇದ್ದರು. ದೇವಸ್ಥಾನದ ಅರ್ಚಕ ಮಂಜುನಾಥ ಜೀರ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

