ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿರುವುದು ಖಂಡನೀಯ: ಎನ್.ರವಿಕುಮಾರ್
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಯಾದಗಿರಿ ಜಿಲ್ಲೆಯ ಮಹಲ್ ರೋಜಾದ ಪೀಠಾಧಿಪತಿ ಶ್ರೀ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾ ಅವರು ಅನೇಕ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಅವರ ಚಿಕ್ಕ ವಯಸ್ಸಿನ ಏಳಿಗೆಯನ್ನು ಸಹಿಸಿದ ಕೆಲ ಜನರು ಅವರ ತೇಜೋವಧೆ ಮಾಡುತ್ತಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಅದನ್ನು Protection of Children from Sexual Offences Act (POCSO) ಪ್ರಕರಣವಾಗಿ ಪರಿಗಣಿಸಿರುವುದು ಸರಿಯಲ್ಲ.
ಏಳು ವರ್ಷದ ಬಾಲಕಿಗೆ ಮಮತೆಯಿಂದ ವರ್ತಿಸಿದ್ದನ್ನು ತಪ್ಪಾಗಿ ಬಣ್ಣಿಸಲಾಗಿದೆ. ಕೆಲ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳು ಆ ವಿಡಿಯೋವನ್ನು ತಿರುಚಿ ಬೇರೆ ಅರ್ಥ ಕಲ್ಪಿಸಿ ಪ್ರಸಾರ ಮಾಡಿವೆ.
ಬಾಲಕಿಯ ಪೋಷಕರು ಯಾವುದೇ ದೂರು ಸಹ ನೀಡಿಲ್ಲ. ಅಲ್ಲದೆ ಬಾಲಕಿಯ ಪೋಷಕರು ಮಲ್ಲಿಕಾರ್ಜುನ ಮುತ್ಯಾ ಅವರ ಬಗ್ಗೆ ಗೌರವ ಹೊಂದಿದ್ದು, ಅವರ ಭಕ್ತರಾಗಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೂ ದುರುದ್ದೇಶದಿಂದ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ POCSO ಅಡಿಯಲ್ಲಿ ದಾಖಲಿಸಲಾಗಿದೆ.
ಆದ್ದರಿಂದ ಪೊಲೀಸ್ ಇಲಾಖೆ ಈ ಪ್ರಕರಣದ ನಿಜಸ್ಥಿತಿಯನ್ನು ಸಮಗ್ರವಾಗಿ ತನಿಖೆ ನಡೆಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಈ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ರಾಜ್ಯದ ಜನತೆಗೆ ಈ ಪ್ರಕರಣದ ಸತ್ಯಾಸತ್ಯತೆಯನ್ನು ಸರ್ಕಾರ ಹೊರತರಬೇಕು ಹಾಗೂ ನಿರಪರಾಧಿಗಳ ಮೇಲೆ ಅನಗತ್ಯವಾಗಿ ಪ್ರಕರಣ ದಾಖಲಿಸುವುದನ್ನು ತಪ್ಪಿಸಬೇಕೆಂದು ನಾನು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಫೇಸ್ಬುಕ್ ನಲ್ಲಿ ಬರೆದಿದ್ದಾರೆ.

