Oplus_0

ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 200 ಕೋಟಿ ಮೀಸಲಿಡಿ | ಪ್ರಸಕ್ತ ಬಜೆಟ್ ನಲ್ಲಿ ಈಡಿಗ ಸಮಾಜದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಂಎಲ್ಸಿ ಜಗದೇವ ಗುತ್ತೇದಾರ ಮುಖ್ಯಮಂತ್ರಿಗೆ ಮನವಿ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ನಮ್ಮ ಈಡಿಗ ಸಮಾಜದ ಅಭಿವೃದ್ಧಿಗಾಗಿ 200 ಕೋಟಿ ಅನುದಾನವನ್ನು ಮೀಸಲಿಡಬೇಕು ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದವರಿಗೆ 50 ಕೋಟಿ ರೂಪಾಯಿಗಳ ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿಡಬೇಕೆಂದು ಎಂದು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬಜೆಟ್ ಪೂರ್ವ ಮುಖ್ಯಮಂತ್ರಿಗಳು ಸೋಮವಾರ ಕರೆದ ಹಿಂದುಳಿದ ವರ್ಗಗಳ ಶಾಸಕರ ಸಭೆಯಲ್ಲಿ, ಎಂಎಲ್ಸಿ ಜಗದೇವ ಗುತ್ತೇದಾರ ಅವರು ಈಡಿಗ ಸಮಾಜದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ನಂತರ ಲಿಖಿತ ರೂಪದಲ್ಲಿ ಮನವಿ ಪತ್ರ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಭಾಗಗಳಾದ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಈ ಭಾಗಗಳಲ್ಲಿ ಐದಾರು ಸಾವಿರ ಸಂಖ್ಯೆಯಲ್ಲಿ ಈಡಿಗ ಸಮುದಾಯದ ಬಡವರು ಸೇಂದಿ ಮಾರಾಟ ನಿಷೇಧವಾದ ಬಳಿಕ ಸೇಂದಿ ಮರ ಕೆತ್ತುವ (ಈಚಲು ಮರ) ಕಾರ್ಮಿಕರಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಿ ಈಚಲು ಮರದಿಂದ ಸೇಂದಿ ತೆಗೆಯುವ ಅಲೆಮಾರಿ ಜೀವನವನ್ನು ನಿರ್ವಹಿಸುತ್ತಿರುವ ಈಡಿಗ ಸಮುದಾಯದವರ ಪರಿಸ್ಥಿತಿ ದುಸ್ತರವಾಗಿದೆ ಎಂದು ಹೇಳಿದರು.

ಈಚಲು ಮರ ಕೇವಲ 3 ತಿಂಗಳು ಮಾತ್ರ ಸೇಂದಿ ನೀಡುತ್ತವೆ. ಆದ್ದರಿಂದ ಕುಲಕಸುಬನ್ನು ನಂಬಿಕೊಂಡು ಜೀವನ ನಿರ್ವಹಿಸುತ್ತಿರುವರಿಗೆ ಒಂದೊಂದು ಪ್ರದೇಶದಲ್ಲಿ ಕೇವಲ 3 ತಿಂಗಳು ಮಾತ್ರ ಕೆಲಸ ಇರುತ್ತದೆ. ಅದಾದ ನಂತರ ಅವರು ಈಚಲು ಮರಗಳಿರುವ ಮತ್ತೊಂದು ಊರಿಗೆ ಹೋಗಿ ತಮ್ಮ ಗುಡಿಸಲುಗಳನ್ನು ಹಾಕಿಕೊಂಡು ಅಲೆಮಾರಿ ಜೀವನವನ್ನು ನಡೆಸುತ್ತಿದ್ದರು. ಈ ಕಾರಣದಿಂದಾಗಿ ಅವರುಗಳು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು, ಬೇರೆ ಉದ್ಯೋಗ ಮಾಡಲು ಸಾಧ್ಯವಾಗಿಲ್ಲ ಎಂಬ ವಿಷಯ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಜೆ. ಹೆಚ್. ಪಟೇಲರವರ ಸರ್ಕಾರದಲ್ಲಿ ತಾವು ಧ್ವನಿಗೂಡಿಸಿ ಸಹಕಾರ ಸಂಘಗಳ ಮೂಲಕ ಸೇಂದಿ ಮಾರಲು ಅನುಮತಿ ನೀಡಿ ವರದಾನವನ್ನು ನೀಡಿರುತ್ತೀರಿ. ಆದರೆ ಅದರಲ್ಲಿನ ಕೆಲವು ಲೋಪದೋಷಗಳಿಂದಾಗಿ ಸದರಿ ವ್ಯವಸ್ಥೆಯು ತಮ್ಮ ಆಶಯದಂತೆ ಈಡೇರಲಿಲ್ಲ. ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಸೇಂದಿ ಮತ್ತು ನೀರಾ ಚಾಲ್ತಿಯಲ್ಲಿದೆ. ಆದರೆ ಕೇವಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಲ್ಲ ಎಂದು ತಿಳಿಸಿದರು.

ಈಡಿಗ ಸಮುದಾಯದವರ ಕುಲಕಸುಬು ಈಚಲು (ಸೇಂದಿ) ಮರ ಕೆತ್ತುವುದಾಗಿದೆ. ಇಲ್ಲಿಯವರೆಗೆ ಯಾವುದೇ ಸಮುದಾಯದ ಕುಲಕಸುಬನ್ನು ಯಾವುದೇ ಸರ್ಕಾರ ಕಸಿದುಕೊಂಡಿಲ್ಲ. ಆದರೆ ಸೇಂದಿ ನಿಷೇಧದಿಂದ ಸೇಂದಿ ಕಾರ್ಮಿಕರು ಹಾಗೂ ಅವರ ಕುಟುಂಬದವರು ಹೆಚ್ಚಾಗಿ ಅನಕ್ಷರಸ್ಥರಿರುವುದರಿಂದ ಅವರೆಲ್ಲರೂ ಬೇರೆ ಕೆಲಸಗಳಿಗೆ ಹೋಗದೆ, ಕೇವಲ ಕುಲಕಸುಬು ನಂಬಿರುವಂಥ ಅವರು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ ಮತ್ತು ಮಹಾರಾಷ್ಟ್ರ ಮತ್ತು ತೆಲಂಗಣಾ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಈಚಲು ಮರ ಕೆತ್ತುವ ಕುಲಕಸುಬು ಹೊಂದಿದ ಕಾರ್ಮಿಕರಿಗೆ ಮಾತ್ರ ಪರ್ಯಾಯ ವ್ಯವಸ್ಥೆ ಎಂದು ಟೀ ಫಾರ್ ಟ್ಯಾಪರ್ಸ್ ವ್ಯವಸ್ಥೆಯನ್ನು ಜಾರಿಗೊಳಿಸಿ ಅವರಿಗೆ ನೀರಾ ಮತ್ತು ಸೇಂದಿ ಮಾರಲು ಅವಕಾಶ ಕಲ್ಪಿಸಿ ಕುಲಕಸುಬನ್ನು ಜೀವಂತವಾಗಿ ಇಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಎಂ.ಎಸ್.ಐ.ಎಲ್ ಮಳಿಗೆಗಳಲ್ಲಿ ಈಡಿಗ ಸೇರಿದಂತೆ 26 ಪಂಗಡಗಳಿಗೆ ಕೆಲಸ ಕಲ್ಪಿಸುವುದು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಈಚಲು ಮರ ಕೆತ್ತುವ ಕುಲಕಸುಬು ಕಳೆದುಕೊಂಡ ಕಾರ್ಮಿಕರಿಗೆ ಎಂ.ಎಸ್.ಐ.ಎಲ್ ಮಳಿಗೆಗಳನ್ನು ನೀಡುವುದು, ಸಿಎಲ್-2, ಸಿಎಲ್-9 ಮಳಿಗೆಗಳಲ್ಲಿ (ಅಬಕಾರಿ ಸನ್ನದುಗಳಲ್ಲಿ) ಶೇ.30 ರಷ್ಟು ತೆಲಂಗಾಣ ಮಾದರಿಯಲ್ಲಿ ಈಡಿಗ ಸಮುದಾಯಕ್ಕೆ ಮೀಸಲು ಕಲ್ಪಿಸುವುದು, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮತ್ತು 12ನೇ ಶತಮಾನದ ಬಸವಣ್ಣನವರ ಒಡನಾಡಿಯಾಗಿ ಕಾರ್ಯನಿರ್ವಹಿಸಿದ ಶರಣರಾಗಿರುವ ಹೆಂಡದ ಮಾರಯ್ಯನವರ ಮತ್ತು ಈಡಿಗ ಅಕ್ಕಮ್ಮನವರ ಜಂಟಿ ಅಧ್ಯಯನ ಪೀಠವನ್ನು ಸ್ಥಾಪಿಸುವುದು.

ಹೆಂಡದ ಮಾರಯ್ಯ ಮತ್ತು ಈಡಿಗರ ಅಕ್ಕಮ್ಮನ ಸ್ಮಾರಕಗಳ ಅಭಿವೃದ್ಧಿಗೆ ತಲಾ 5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವುದು, ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 200 ಕೋಟಿ ರೂಪಾಯಿಯ ಹೆಚ್ಚಿನ ಅನುದಾನವನ್ನು ನೀಡುವುದು, ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ತಳಿಯನ್ನು ವಿಧಾನ ಸೌಧದ ವ್ಯಾಪ್ತಿಯಲ್ಲಿ ಸ್ಥಾಪಿಸುವುದು, ಕಲಬುರಗಿಯಲ್ಲಿ ಈಡಿಗ ಸಮುದಾಯ ಭವನ, ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಕ್ಕೆ 5 ಎಕರೆ ಸರ್ಕಾರಿ ಜಾಗ ಕಲ್ಪಿಸುವುದು.

ಈ ಬೇಡಿಕೆಗಳನ್ನು ಈಡೇರಿಸುವುದರ ಮುಖಾಂತರ ಸಮುದಾಯದ ಅಭಿವೃದ್ಧಿಗೆ ಅನುಕೂಲ ಕಲ್ಪಿಸಬೇಕು ಹಾಗೂ ಮಹಾರಾಷ್ಟ್ರ ಮತ್ತು ತೆಲಂಗಣಾ ರಾಜ್ಯಗಳಿಗೆ ವಲಸೆ ಹೋಗಿರುವ ಈಡಿಗ ಸಮುದಾಯದ ಜನಾಂಗದವರು ಕರ್ನಾಟಕಕ್ಕೆ ಮತ್ತೆ ವಾಪಸ್ಸು ಬರುವ ದಿಸೆಯಲ್ಲಿ ಬೇಡಿಕೆಗಳಿಗೆ ಅನುದಾನವನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!