ಮಾ.10 ರೊಳಗೆ ಗ್ರಾಮ ಪಂಚಾಯಿತಿಗಳು ಬಜೆಟ್ ಮಂಡಿಸಲು ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳು ಮಾ.10 ರೊಳಗೆ ಆಯವ್ಯಯ ಮಂಡಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ನಿರ್ದೇಶನ ನೀಡಿದ್ದಾರೆ.
ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ವಿಶೇಷವಾದ ಮಹತ್ವವಿದೆ. ಗ್ರಾಮ ಪಂಚಾಯತಿಗಳು ಗ್ರಾಮ ಮಟ್ಟದಲ್ಲಿ ಸ್ಥಳೀಯ ಸರ್ಕಾರಗಳಂತೆ ಕಾರ್ಯ ನಿರ್ವಹಿಸಬೇಕೆಂಬುದು ಸಂವಿಧಾನದ ಆಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಗ್ರಾಮ ಪಂಚಾಯತಿಗಳು ಸ್ಥಳೀಯವಾಗಿ ಜನರಿಗೆ ಅವಶ್ಯವಾಗಿ ಹಾಗೂ ದೈನಂದಿನ ಸೇವೆಗಳನ್ನು ನೀಡಲು ತಾವೇ ಕಾರ್ಯ ಕ್ರಮಗಳನ್ನು ಹಾಕಿಕೊಳ್ಳಬೇಕು. ಆ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುವ ಶಾಸನಬದ್ಧ ಅನುದಾನ, ವಿವಿಧ ಯೋಜನೆಗಳಡಿ ರಾಜ್ಯ ಸರ್ಕಾರ ನೀಡುತ್ತಿರುವ ಆರ್ಥಿಕ ನೆರವು ಮಾತ್ರವಲ್ಲದೆ ಪಂಚಾಯತಿಗಳು ಸಂಗ್ರಹಿಸಿರುವ ಸ್ವತಂತ್ರ ಸಂಪನ್ಮೂಲಗಳಡಿ ತಮ್ಮ ಆಯವ್ಯಯಗಳನ್ನು ತಾವೇ ತಯಾರಿಸಿಕೊಂಡು ಅನುಮೋದನೆ ಪಡೆಯಬೇಕು ಎಂದು ಸಚಿವರು ನಿರ್ದೇಶಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ಅಧಿನಿಯಮದಡಿ ಗ್ರಾಮ ಪಂಚಾಯತಿಗಳು ತಮಗೆ ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ಬಾಬ್ದುಗಳು ಲಭ್ಯವಾಗುವ ಅನುದಾನ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳನ್ನೊಳಗೊಂಡಂತೆ ಜನಸ್ನೇಹಿ ಆಯವ್ಯಯ ತಯಾರಿಸಿ ಮಾ.10ರೊಳಗೆ ಗ್ರಾಮ ಪಂಚಾಯತಿಗಳ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಸೂಚಿಸುವಂತೆ ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.