ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಪಲ್ಲಕ್ಕಿ ಸೇವೆಗೆ ಅನುಮತಿ ನೀಡಲು ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಹಾಗೂ ಲಕ್ಷಾಂತರ ಭಕ್ತಾದಿಗಳನ್ನು ಹೊಂದಿದ ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಭಕ್ತಾಧಿಗಳಿಗೆ ಪಲ್ಲಕ್ಕಿ ಸೇವೆ ಮಾಡಲು ಅನುಮತಿ ನೀಡಬೇಕು ಎಂದು ನಾಗೇಶ್ ಕೃಷ್ಣಾಜಿ ಏಕಬೋಟೆ ಮತ್ತು ವಿಠಲ್ ಕೃಷ್ಣಾಜಿ ಏಕಬೋಟೆ ಅವರು ಮನವಿ ಮಾಡಿದ್ದಾರೆ.
ಪಟ್ಟಣದ ನಾಗಾವಿ ಯಾತ್ರಿಕ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2017 ರಲ್ಲಿ 60 ಸಾವಿರ ವೆಚ್ಚದಲ್ಲಿ ತಯ್ಯಾರಿಸಿದ ಬೆಳ್ಳಿ ಪಲ್ಲಕ್ಕಿ ದೇವಸ್ಥಾನಕ್ಕೆ ಅರ್ಪಿಸಿದ್ದೇವೆ ಆದರೆ ಅದರ ಉಪಯೋಗವಾಗದೇ ಒಂದು ಕೋಣೆಯಲ್ಲಿ ಇಟ್ಟು ಬೀಗ ಜಡಿಯಲಾಗಿದೆ ಹೀಗಾಗಿ ಬಹಳ ಬೇಸರವನ್ನುಂಟು ಮಾಡಿದೆ ಎಂದು ತಮ್ಮ ಅಸಮಾಧಾನ ತೋಡಿಕೊಂಡರು.
ಪಲ್ಲಕ್ಕಿ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಈಗಾಗಲೇ ಸಾಕಷ್ಟು ಬಾರಿ ತಹಸೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಪಲ್ಲಕ್ಕಿ ಸೇವೆ ಮಾಡಲು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ ಆದ್ದರಿಂದ ಭಕ್ತರ ಅಭಿಲಾಷೆ ಹಾಗೂ ಆಸಕ್ತಿಯ ಮೇರೆಗೆ ದೇವಸ್ಥಾನದ ಸುತ್ತ ಪಲ್ಲಕ್ಕಿ ಪ್ರದಕ್ಷಿಣೆ ಹಾಕಲು ಭಕ್ತಿಯ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಾಲಾಜಿ ವಾಂಜರೆ ಸೇರಿದಂತೆ ಇತರರು ಇದ್ದರು.