ನಾಲವಾರದಲ್ಲಿ ಹಳೆಯ ಜಾತ್ರೆ ಏ.27 ಕ್ಕೆ, ಸದ್ಭಕ್ತರ ಹರಕೆಯ ತನಾರತಿ ಉತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಇದೇ ಏ. 27 ರಂದು ಪೀಠಾಧಿಪತಿ ಪೂಜ್ಯಶ್ರೀ ಡಾ. ಸಿದ್ದ ತೋಟೆಂದ್ರ ಮಹಾಸ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ ಶ್ರೀಮಠದ ಹಳೆಯ ಜಾತ್ರೆ ಹಾಗೂ ಪ್ರಸಕ್ತ ವರ್ಷದ ಎರಡನೆಯ ತನಾರತಿ ಉತ್ಸವ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.
ಅಕ್ಷಯತದಿಗೆ ಅಮಾವಾಸ್ಯೆಯ ದಿನ ಬೆಳಿಗ್ಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಲಿದ್ದು, ಸಂಜೆ ಪೂಜ್ಯಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ, ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ಮಾಸಿಕ ಶಿವಾನುಭವ ಚಿಂತನ ಹಾಗೂ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹಿರಿಯ ಸಾಹಿತಿ ಹಾಗೂ ಕಲಾವಿದರಿಂದ ಉಪನ್ಯಾಸ ಹಾಗೂ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯರಾತ್ರಿ ನಾಡಿನಲ್ಲಿಯೇ ವಿಶೇಷವಾದ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿದರ ಪ್ರತಿಕ ತನಾರತಿ ಉತ್ಸವ ಸೇವೆ ನಡೆಯಲಿದ್ದು, ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಪಾರಂಪರಿಕ ಪೋಷಾಕು ತೊಟ್ಟು ಉತ್ಸವದ ನೇತೃತ್ವ ವಹಿಸಲಿದ್ದಾರೆ.
ಕರ್ನಾಟಕ, ಆಂಧ್ರ, ತೆಲಂಗಾಣಾ,ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳ ಸಾವಿರಾರು ಸದ್ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಿದ ಮಹಾಗುರುವಿಗೆ ತನಾರತಿ ಸೇವೆಯನ್ನು ಸಮರ್ಪಿಸಲಿದ್ದಾರೆ.
ವರ್ಷದಲ್ಲಿ ಮೂರು ಬಾರಿ ನಡೆಯುವ ಈ ತನಾರತಿ ಉತ್ಸವವು ವರ್ಷದ ಎರಡನೆಯ ಉತ್ಸವ. ಜಾತಿ, ಮತ ಪಂಥಗಳ ಭೇಧ ಮರೆತು ನಾವೆಲ್ಲರೂ ಒಂದೇ ಎಂಬ ಭಾವದಿಂದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳ ಗದ್ದುಗೆಗೆ ಭಕ್ತಿಯಿಂದ ತನಾರತಿ ಬೆಳಗಿ ಕೃತಾರ್ಥರಾಗುತ್ತಾರೆ.
ಅಮಾವಾಸ್ಯೆ ಮರುದಿನ ಸೋಮವಾರ ಸಂಜೆ ಶ್ರೀಮಠದ ಆವರಣದಲ್ಲಿ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ ಬಾಜೆ ಭಜಂತ್ರಿ ಮಂಗಳವಾದ್ಯಗಳೊಂದಿಗೆ ಸಂಭ್ರಮದಿಂದ ನಡೆಯಲಿದೆ. ಆದ್ದರಿಂದ ನಾಡಿನ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಮಹಾದೇವ ಗಂವ್ಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.