ಶಿವಾನುಭವ ಚಿಂತನಕ್ಕೆ ನಾಲ್ಕು ದಶಕದ ಸಂಭ್ರಮ, ನಾಳೆ ಶ್ರೀ ಕ್ಷೇತ್ರ ನಾಲವಾರದಲ್ಲಿ ಶಿವಾನುಭವ ಚಿಂತನ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ದಿನ ಛಟ್ಟಿ ಅಮಾವಾಸ್ಯೆಯ ದಿನ ಶ್ರೀಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಪ್ರತಿ ತಿಂಗಳು ನಡೆದುಕೊಂಡು ಬರುತ್ತಿರುವ ಶಿವಾನುಭವ ಚಿಂತನಕ್ಕೆ ನಾಲ್ಕು ದಶಕದ ಸಂಭ್ರಮವಿದೆ ಎಂದು ಮಠದ ವಕ್ತಾರ ಮಹಾದೇವ ಗಂವಾರ್ ತಿಳಿಸಿದ್ದಾರೆ.

1985 ರಲ್ಲಿ ಪೀಠಾಧಿಪತಿ ಡಾ. ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ಆದೇಶದಂತೆ ಇದೇ ಛಟ್ಟಿ ಅಮಾವಾಸ್ಯೆಯಂದು ಆರಂಭಗೊಂಡ ಶಿವಾನುಭವ ಚಿಂತನ ಸಮಾರಂಭಗಳು ಕಳೆದ ನಾಲ್ಕು ದಶಕಗಳಿಂದ ಒಂದಕ್ಕಿಂತಲೂ ಒಂದು ವಿಶೇಷ ಎನ್ನುವಂತೆ ಸಾಹಿತ್ಯ ಸಮ್ಮೇಳನಗಳಂತೆ, ಸಂಗೀತ ಗೋಷ್ಠಿಗಳಂತೆ ಮತ್ತು ಅದ್ದೂರಿಯ ಜಾತ್ರೆಗಳಂತೆ ನಡೆದುಕೊಂಡು ಬಂದಿವೆ.

ನಾಲ್ಕು ದಶಕಗಳ ಹಿಂದೆ ಶಿವಾನುಭವ ಚಿಂತನ, ಶಿವಾನುಭವ ಗೋಷ್ಠಿಗಳೆಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಧಾರವಾಡದ ಮುರಘಾ ಮಠ, ಗದುಗಿನ ತೋಂಟದಾರ್ಯ ಮಠ, ಹುಬ್ಬಳಿಯ ಮೂರು ಸಾವಿರ ಮಠ ಎನ್ನುವಂತಿದ್ದ ಕಾಲದಲ್ಲಿ ಅವಿಭಕ್ತ ಕಲಬುರ್ಗಿ ಯಾದಗಿರಿ ಜಿಲ್ಲೆಯಲ್ಲಿ ಶಿವಾನುಭವ ಚಿಂತನ ಸಮಾರಂಭಗಳನ್ನು ನಡೆಸುವುದರ ಮೂಲಕ, ನಿರಂತರ ಅನ್ನ,ಜ್ಞಾನ ದಾಸೋಹಗಳನ್ನು ಆರಂಭಿಸುವುದರ ಮೂಲಕ ಅಂದು ಹಚ್ಚಿದ ಬೆಳಕು, ಅಂದು ಹೊತ್ತಿಸಿದ ಒಲೆ ಇಂದಿಗೂ ಆರಿಲ್ಲ ಎನ್ನುವಂತೆ ನಡೆದುಕೊಂಡು ಬಂದಿವೆ.

ಇಡೀ ನಾಡಿನ, ಪರ ನಾಡಿನ ಗಮನವನ್ನು ಸೆಳೆದಿವೆ. ಈ ಸಮಾರಂಭಗಳಲ್ಲಿ ನಾಡಿನ ಹಿರಿಯ ಮಠಾಧೀಶರಾದ ಶ್ರೀ ಸಿದ್ಧಗಂಗಾ ಮಠದ ಶತಾಯುಷಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಆದಿಚುಂಚನಗಿರಿಯ ಶ್ರೀ ಬಾಲ ಗಂಗಾಧರನಾಥ ಮಹಾಸ್ವಾಮಿಗಳವರು, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀ ಪಾದಂಗಳವರು, ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು, ಶಿವಾನುಭವ ಚರಮೂರ್ತಿ ಬೆಂಗಳೂರಿನ ಬೇಲಿ ಮಠದ ಶಿವರುದ್ರ ಮಹಾಸ್ವಾಮಿಗಳವರು ಸೇರಿದಂತೆ ನಾಡಿನ ಬಹುತೇಕ ಎಲ್ಲಾ ಹಿರಿಯ ಮಠಾಧೀಶರು, ಚಲನಚಿತ್ರರಂಗದ ಮೇರುನಟ ಡಾ.ರಾಜಕುಮಾರ್, ಅಂಬರೀಶ್ ಸೇರಿದಂತೆ ಚಲನಚಿತ್ರರಂಗದ ಅನೇಕ ದಿಗ್ಗಜರು, ಪ್ರಸ್ತುತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಗೊ.ರು. ಚ.ಅವರಿಂದ ಹಿಡಿದು ಅನೇಕ ಹಿರಿಯ ಸಾಹಿತಿಗಳು, ಅಂತರಾಷ್ಟ್ರೀಯ ಖ್ಯಾತಿಯ ಅನೇಕ ಸಂಗೀತ ಕಲಾವಿದರು ಮಾಜಿ ಪ್ರಧಾನಿ ದೇವೇಗೌಡರಿಂದ ಹಿಡಿದು ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ರಾಜಕೀಯ ಮುಖಂಡರು ಭಾಗವಹಿಸಿ ತಮ್ಮ  ತಮ್ಮ ಅನುಭಾವವನ್ನು ಹಂಚಿಕೊಂಡ ಕೀರ್ತಿ ನಾಲವಾರ ಶ್ರೀ ಮಠಕ್ಕಿದೆ, ಇಂತಹ ಶಿವಾನುಭವ ಚಿಂತನದ ಈ ವರ್ಷದ ವಾರ್ಷಿಕೋತ್ಸವ ಛಟ್ಟಿ ಅಮಾವಾಸ್ಯೆಯ ದಿನ ಡಿಸೆಂಬರ್ 1 ರಂದು ಸಂಜೆ ನೆರವೇರಲಿದೆ ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!