ಸಹಸ್ರಾರು ಭಕ್ತರ ಮಧ್ಯೆ ಲಿಂ. ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೆ, ಡಾ. ಸಿದ್ಧತೋಟೇಂದ್ರ ಶ್ರೀಗಳ ಜನ್ಮ ವರ್ಧಂತಿ ಮಹೋತ್ಸವ | ರೈತರು ಬರದ ಭಯದಿಂದ ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ: ನಾಲವಾರ ಶ್ರೀ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ, ಭಕ್ತರ ಆರಾಧ್ಯ ಕೇಂದ್ರವಾದ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಆಯುಧಪೂಜೆಯ ಪುಣ್ಯದಿನದಂದು ಶ್ರೀಮಠದ ಪ್ರಸ್ತುತ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮೋತ್ಸವ ವರ್ಧಂತಿ ಮಹೋತ್ಸವ ಹಾಗೂ ಶ್ರೀಮಠದ ಹಿಂದಿನ ಗುರುಗಳಾದ ಲಿಂ. ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವವು ಸಹಸ್ರಾರು ಭಕ್ತರ ಜಯಘೋಷ, ಭಕ್ತಿಭಾವದ ನಡುವೆ ಅತ್ಯಂತ ಅದ್ಧೂರಿಯಾಗಿ ನೆರವೇರಿತು.

ಆಯುಧಪೂಜೆ ದಿನ ರಾತ್ರಿ ಲಿಂ. ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಕರ್ತೃ ಗದ್ದುಗೆಗೆ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಶ್ರೀಮಠದ ಮುಂಭಾಗದ ಆವರಣದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯ ಮೇಲೆ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಜರುಗಿತು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ನಾಡು ಎದುರಿಸುತ್ತಿರುವ ಭೀಕರ ಬರಗಾಲದ ಕುರಿತು ಮಾತನಾಡಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು. “ನಾಡಿನ ರೈತರು ಬರಗಾಲಕ್ಕೆ ಹೆದರಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಭಗವಂತ ನಮ್ಮ ಜೊತೆಗಿದ್ದಾನೆ ಎಂಬ ದೃಢ ನಂಬಿಕೆಯಿಂದ ಮುನ್ನಡೆದಾಗ ಯಾವುದೇ ಆತಂಕ ಎದುರಾಗುವುದಿಲ್ಲ. ಮುಂಗಾರು ಮಳೆ ಕೈಕೊಟ್ಟು ಭೂಮಿ ಬರಡಾಗಿದೆ, ಹಿಂಗಾರಿನ ಮೂಲಕವಾದರೂ ವರುಣದೇವ ಧರೆಯನ್ನು ತಣಿಸಲಿ ಎಂದು ಎಲ್ಲರೂ ಸೇರಿ ಭಗವಂತನಲ್ಲಿ ಪ್ರಾರ್ಥನೆ ಮಾಡೋಣ” ಎಂದು ಅವರು ಭಾವಪೂರ್ಣವಾಗಿ ನುಡಿದರು.

ಕಾರ್ಯಕ್ರಮದ ನೇತೃತ್ವವನ್ನು ಸೂಗೂರಿನ ಡಾ ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು, ಮುದುನೂರು ಶ್ರೀಗಳು ಚಟ್ನಳ್ಳಿಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಾದಗಿರಿ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮುಖಂಡರಾದ ಸಂಗಾರೆಡ್ಡಿಗೌಡ ಮಲ್ಹಾರ, ಸಾಯಿನಾಥ್ ಇಂಜಿನಿಯರ್, ಮಹೇಶ ಸ್ವಾಮಿ ಚಿಂಚೋಳಿ, ಪ್ರದೀಪ ಪುರಾಣಿಕ, ಬಸವರಾಜ್ ಮುಕ್ಕಣ್ಣ ಬಳಬಟ್ಟಿ. ಸಿದ್ದು ಅಂಗಡಿ ಜೇವರ್ಗಿ, ಬೆಂಗಳೂರಿನ ಶಿವಲಿಂಗ ಭೀಮನಹಳ್ಳಿ, ಶ್ರೀಕಾಂತಗೌಡ ಮಡ್ನಾಳ ಇಬ್ರಾಹಿಮಪುರ ಸೇರಿದಂತೆ ಅನೇಕ ಗಣ್ಯರು, ಮತ್ತು ಕರ್ನಾಟಕ. ಮಹಾರಾಷ್ಟ್ರ. ತೆಲಂಗಾಣ ರಾಜ್ಯಗಳ ಸಹಸ್ರ ಸಹಸ್ರ ಭಕ್ತರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು.

ಸಮಾರಂಭದ ಆಕರ್ಷಣೆಯಾಗಿ ವೇ.ಮೂ. ಮಂಜುನಾಥ ಶಾಸ್ತ್ರಿ ನೇತೃತ್ವದ ವೈದಿಕ ತಂಡದಿಂದ ಉತ್ತರ ಭಾರತದ ಪ್ರಸಿದ್ಧ ಗಂಗಾರತಿ ಕಾರ್ಯಕ್ರಮವು ಭಕ್ತರಲ್ಲಿ ಭಕ್ತಿ ಭಾವವನ್ನು ಇಮ್ಮಡಿಗೊಳಿಸಿತು. ಮಹಾರಾಷ್ಟ್ರದ ರಾಜ್ಯದ ವಾರ್ಕರಿ ಸಂಪ್ರದಾಯದ ವಿಶೇಷ ಭಜನಾ ಮೇಳದ ಭಜನಾ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿಬಂದಿತು. ಕು. ಈಶಾ ಪಡಶೆಟ್ಟಿ ತಂಡದವರು, ಕು. ಪ್ರತೀಕಾ ಚಿತ್ತಾಪುರ, ನಿತ್ಯಶ್ರೀ ಪಾಟೀಲ ಕಲಬುರಗಿ ಅವರಿಂದ ಭರತನಾಟ್ಯ ಸೇರಿದಂತೆ ಹಲವಾರು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇದೇ ಸಂದರ್ಭದಲ್ಲಿ ಶ್ರೀಮಠದ ಅಭಿವೃದ್ಧಿಯ ಮುಂದಿನ ಹೆಜ್ಜೆಯಾಗಿ ನೂತನ ಒಳಾಂಗಣ ಪ್ರಾಕಾರದ ನಿರ್ಮಾಣ ಕಾಮಗಾರಿಗೆ ಪೂಜ್ಯರ ಸಮ್ಮುಖದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಪತ್ರಕರ್ತ ಡಾ. ಸಿದ್ಧರಾಜರೆಡ್ಡಿ ಯಾದಗಿರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!