ನಾಲವಾರದಲ್ಲಿ ವೈಭವದ ತನಾರತಿ ಉತ್ಸವ, ಆರಾಧ್ಯ ಗುರುವಿಗೆ ಹರಕೆ ಸಲ್ಲಿಸಿದ ಸಹಸ್ರಾರು ಭಕ್ತರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾದ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ತನಾರತಿ ಉತ್ಸವವು ಸಹಸ್ರಾರು ಭಕ್ತರ ಮಧ್ಯೆ ಅಕ್ಷಯತದಿಗೆ ಅಮಾವಾಸ್ಯೆಯ ಅಂಗವಾಗಿ ಸೋಮವಾರ ಬೆಳಗಿನ ಜಾವ ಭಕ್ತಿ ಭಾವದಿಂದ ನೆರವೇರಿತು.
ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ನಾಲವಾರದ ತನಾರತಿ ಉತ್ಸವವು ಇಷ್ಟಾರ್ಥಗಳು ಈಡೇರಿದ ಪ್ರಯುಕ್ತ ಕೃತಜ್ಞತೆಯ ರೂಪದಲ್ಲಿ ಕರ್ತೃ ಕೋರಿಸಿದ್ಧೇಶ್ವರ ರ ಗದ್ದುಗೆಗೆ ಸಲ್ಲಿಸುವ ಹರಕೆಯಾಗಿದ್ದು ದೇಶದ ವಿವಿಧ ಭಾಗಗಳ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಹರಕೆ ತೀರಿಸಿದರು.
ಶ್ರೀ ಮಠದ ಹಳೆಯ ಜಾತ್ರೆ ಹಾಗೂ ಪ್ರಸಕ್ತ ವರ್ಷದ ಎರಡನೆಯ ತನಾರತಿ ಉತ್ಸವವು ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವೈಭವದಿಂದ ನಡೆಯಿತು. ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ವಿಶೇಷ ಉಡುಪು ಧರಿಸಿ ಉತ್ಸವದ ನೇತೃತ್ವ ವಹಿಸಿದ್ದರು. ಅವರ ಹಿಂದೆ ಸಾವಿರಾರು ಸದ್ಭಕ್ತರು ವಿಶೇಷವಾಗಿ ತಯಾರಿಸಿದ ಹಣತೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮಠದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿದರು.
ಪುರವಂತಿಕೆ, ಪೂರ್ಣಕುಂಭ, ಭಾಜಾ-ಭಜಂತ್ರಿ, ವೈದಿಕರ ವೇದಘೋಷಗಳ ಮಧ್ಯೆ ನಡೆದ ಈ ಉತ್ಸವ ರವಿವಾರ ಮಧ್ಯರಾತ್ರಿ ಪ್ರಾರಂಭವಾಗಿ ಸೋಮವಾರ ಬೆಳಗಿನ ಜಾವದವರೆಗೂ ನಡೆಯಿತು. ಮಧ್ಯರಾತ್ರಿ ಸ್ನಾನಾದಿಗಳನ್ನು ಪೂರೈಸಿಕೊಂಡು, ಗದ್ದುಗೆಗೆ ನಮಿಸಿ, ಗೋದಿಹಿಟ್ಟಿನಿಂದ ವಿಶೇಷ ಪ್ರಣತೆಗಳನ್ನು ತಯಾರಿಸಿ ಅದರಲ್ಲಿ ಜ್ಯೋತಿ ಪ್ರಜ್ವಲಿಸಿ ಮಹಾಗುರುವಿಗೆ ಬೆಳಗಿ ಭಕ್ತರು ಧನ್ಯತೆಯನ್ನು ಅನುಭವಿಸಿದರು.
ಭಕ್ತರು ಬೇಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ತನಾರತಿ ಹರಕೆಯನ್ನು ಸಲ್ಲಿಸುವ ಪರಂಪರೆ ಕಳೆದ ಮೂರು ಶತಮಾನಗಳಿಂದಲೂ ಶ್ರೀಮಠದಲ್ಲಿ ನಡೆಯುತ್ತಾ ಬಂದಿದ್ದು ನಾಲವಾರ ಶ್ರೀಮಠದ ಪಾರಂಪರಿಕ ಉತ್ಸವವಾಗಿದೆ. ತನಾರತಿ ಸಂದರ್ಭದಲ್ಲಿ ದೀಪಗಳ ಸಾಲು ನದಿಯ ರೀತಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತದೆ. ಈ ರೀತಿಯ ವೈಶಿಷ್ಟ್ಯ ಪೂರ್ಣ ಉತ್ಸವ ನಾಡಿನ ಯಾವುದೇ ಭಾಗದಲ್ಲಿ ಕಾಣಸಿಗುವುದಿಲ್ಲ. ಈ ಉತ್ಸವ ಆರಂಭವಾಗುತ್ತಿದ್ದಂತೆ ಶ್ರೀ ಕ್ಷೇತ್ರ ಸನ್ನತಿ ವೇದ ಪಾಠ ಶಾಲೆಯ ಮಕ್ಕಳಿಂದ ಸಂಸ್ಕೃತ ವೇದಘೋಷಗಳು ಮೊಳಗಿದವು.