ಕಲಬುರಗಿಯಲ್ಲಿ ನ.2 ರಂದು ಈಡಿಗರ ಅಕ್ಕಮ್ಮ, ಶರಣ ಹೆಂಡದ ಮಾರಯ್ಯ ಸ್ಮರಣೋತ್ಸವ | ರಾಷ್ಟ್ರೀಯ ಈಡಿಗ ಮಹಾಮಂಡಳಿ ನೂತನ ಜಿಲ್ಲಾ ಸಮಿತಿ ಪದಗ್ರಹಣ, ಪ್ರಶಸ್ತಿ ಪ್ರದಾನ: ಪ್ರಣವಾನಂದ ಶ್ರೀ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಶರಣರಾಗಿ ಮೆರೆದ ಅತಿ ಹಿಂದುಳಿದ ಸಮುದಾಯದ ಶರಣ ಹೆಂಡದ ಮಾರಯ್ಯ ಹಾಗೂ ಶರಣೆ ಈಡಿಗರ ಅಕ್ಕಮ್ಮನವರ ಸ್ಮರಣೋತ್ಸವ, ರಾಷ್ಟ್ರೀಯ ಈಡಿಗ ಮಹಾಮಂಡಳಿ ನೂತನ ಜಿಲ್ಲಾ ಸಮಿತಿ ಪದಗ್ರಹಣ ಹಾಗೂ ಈಡಿಗರ ಅಕ್ಕಮ್ಮ, ಶರಣ ಹೆಂಡದ ಮಾರಯ್ಯ ಹೆಸರಿನಲ್ಲಿ 25 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ, ಉಪನ್ಯಾಸ ಕಾರ್ಯಕ್ರಮ ನವಂಬರ್ 2 ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನುಭವ ಮಂಟಪದಲ್ಲಿದ್ದ 770 ಅಮರಗಣಂಗಳಲ್ಲಿ 154 ವಚನ ಬರೆದ ಶರಣೆ ಈಡಿಗರ ಅಕ್ಕಮ್ಮ ಹಾಗೂ 12 ವಚನಗಳನ್ನು ಬರೆದ ಶರಣ ಹೆಂಡದ ಮಾರಯ್ಯನವರ ಕೊಡುಗೆಯನ್ನು ಬೆಳಕಿಗೆ ತರಲು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ವತಿಯಿಂದ ರಾಜ್ಯಮಟ್ಟದಲ್ಲಿ ವಿಶೇಷ ಉಪನ್ಯಾಸ ಹಾಗೂ ಪ್ರಚಾರದ ಉದ್ದೇಶವನ್ನು ಹೊಂದಲಾಗಿದೆ. ಪ್ರಸ್ತುತ ಕೆಲವೇ ಪ್ರಮುಖ ಶರಣರನ್ನು ಮಾತ್ರ ಉಲ್ಲೇಖಿಸಿ ಪ್ರಚಾರ ಮಾಡುವ ಬದಲು ಅನುಭವ ಮಂಟಪದಲ್ಲಿದ್ದ ಈಡಿಗ ಸಮುದಾಯದ ಇಬ್ಬರು ಶರಣರ ಬಗ್ಗೆ ಕೂಡ ಮಾಹಿತಿ ತಿಳಿಸುವ ಪ್ರಯತ್ನದ ಭಾಗವಾಗಿ ವಿಶೇಷ ಕಾರ್ಯಕ್ರಮವನ್ನು ನವೆಂಬರ್ 2 ರಂದು ಕಲಬರಗಿಯ ನಾಗನಹಳ್ಳಿ ಹೋಟೆಲ್ ಬೃಂದಾವನ ಗ್ರಾಂಡ್ ಬಲದೇವ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಮುದಾಯದ ಮುಖಂಡರು ಶಾಸಕ ಕಾರ್ಕಳದ ವಿ. ಸುನಿಲ್ ಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಮಾಜಿ ಎಂಎಲ್ಸಿ ಎಚ್.ಆರ್ ಶ್ರೀನಾಥ್, ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಅನುಭವ ಮಂಟಪದ ಪ್ರಮುಖ ಲಿಂಗಾಯಿತ ಗುರುಗಳು ಹಾಗೂ ಹಿಂದುಳಿದ ವರ್ಗಗಳ ಸ್ವಾಮಿಜಿಗಳು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
25 ಸಾಧಕರಿಗೆ ಪ್ರಶಸ್ತಿ ಪ್ರದಾನ:
ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲು 13 ಮಂದಿಗೆ ಶರಣೆ ಈಡಿಗರ ಅಕ್ಕಮ್ಮ ಹೆಸರಿನಲ್ಲಿ ಹಾಗೂ 12 ಜನ ಸಾಧಕರಿಗೆ ಶರಣ ಹೆಂಡದ ಮಾರಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಸೇರಿದಂತೆ ಅನೇಕ ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಆಯ್ಕೆ ಸಮಿತಿಯ ತಜ್ಞರು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಡಾ ಪ್ರಣವಾನಂದ ಶ್ರೀಗಳು ಹೇಳಿದರು.
ಶರಣರ ಬಗ್ಗೆ ವಿಶೇಷ ಉಪನ್ಯಾಸ:
ಆಚಾರದ ಶರಣೆ ಈಡಿಗರ ಅಕ್ಕಮ್ಮ ಯಾದಗಿರಿ ಜಿಲ್ಲೆಯ ಎಲೇರಿಯಲ್ಲಿದ್ದು 154 ವಚನಗಳನ್ನು ನೀಡಿದ್ದಾರೆ, ಅವರ ಸಮಾಧಿ ಸ್ಥಳವು ಶಿವಮೊಗ್ಗದ ಕೋಟೆಗಾನ ಎಂಬಲ್ಲಿ ಸುಮಾರು ಮೂರುವರೆ ಎಕರೆ ಜಾಗದಲ್ಲಿದೆ. ಅವರ ಬದುಕಿನ ಸಾಧನೆಯ ಬಗ್ಗೆ ಚಿಂತಕರಾದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹಾಗೂ ಶರಣ ಹೆಂಡದ ಮಾರಯ್ಯ ನವರ ಬಗ್ಗೆ ಉಪನ್ಯಾಸಕ ಹಾಗೂ ಚಿಂತಕರಾದ ಬಿ.ಎಂ ರಾವೂರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಪದಗ್ರಹಣ ಸಮಾರಂಭ:
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಕಲಬುರಗಿ ಜಿಲ್ಲಾ ನೂತನ ಪದಾಧಿಕಾರಿಗಳನ್ನು ಆ ದಿನ ಆಯ್ಕೆ ಮಾಡಿ ಪದಗ್ರಹಣ ಸಮಾರಂಭ ಕೂಡ ನಡೆಯಲಿದ್ದು ಬೆಳಗ್ಗೆ 10.30 ರಿಂದ ಸ್ಮರಣೋತ್ಸವ ಉದ್ಘಾಟನೆ, ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ನಡೆಯಲಿದೆ. ಮಧ್ಯಾಹ್ನದ ನಂತರ ಸಮುದಾಯದ ವಿವಿಧ ವಿಷಯಗಳ ಕುರಿತು ಚರ್ಚೆ ಹಾಗೂ ಕಲಬುರಗಿ ಜಿಲ್ಲೆ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸ್ವಾಮೀಜಿ ಹೇಳಿದರು.
ಮುಖ್ಯಮಂತ್ರಿ ಡಿಕೆ.ಶಿ ಸಮಾಜಕ್ಕೆ ಸಕಾರಾತ್ಮಕ ಸ್ಪಂದನೆ ಶ್ಲಾಘನೆ:
ಕಳೆದ ಆರು ವರ್ಷಗಳಲ್ಲಿ ನಡೆಸಿದ ಹೋರಾಟ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈಗಾಗಲೇ ನಿಗಮ ರಚನೆಗೊಂಡಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವುದು, ನಿಗಮಕ್ಕೆ ಹೆಚ್ಚು ಹಣ ಒದಗಿಸುವುದು ಮುಂತಾದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದನೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರ ಮೇಲಿನ ನಂಬಿಕೆಯಿಂದ ಹೋರಾಟ ಕೈಬಿಟ್ಟು ಸಂಧಾನ ಮತ್ತು ಚರ್ಚೆಯ ಮೂಲಕ ಸಮಸ್ಯೆ ನಿವಾರಣೆಗೆ ಮತ್ತು ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುತ್ತದೆ. ಎಲ್ಲ ಸಮುದಾಯಗಳಿಗೂ ಕಲಬುರಗಿಯಲ್ಲಿ ಸಮುದಾಯ ಭವನವಿದ್ದರೂ ಈಡಿಗ ಭವನ ಇಲ್ಲದೆ ಇರುವ ಕೊರತೆ ಕಾಡುತ್ತಿದ್ದು ಇದನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು. ಕೇವಲ ಈಡಿಗ ಸಮುದಾಯ ಮಾತ್ರವಲ್ಲದೆ ಅತಿ ಹಿಂದುಳಿದ ಮತ್ತು ಹಿಂದುಳಿದ ವರ್ಗಗಳ 32ಕ್ಕೂ ಹೆಚ್ಚು ಸ್ವಾಮೀಜಿಗಳ ನೇತೃತ್ವದಲ್ಲಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಕಾರ್ಯದರ್ಶಿ ವೆಂಕಟೇಶ ಗುಂಡಾನೂರು, ಶಕ್ತಿಪೀಠದ ಮಾಧ್ಯಮ ಕಾರ್ಯದರ್ಶಿ ಡಾ. ಸದಾನಂದ ಪೆರ್ಲ, ಈಡಿಗ ಸಮಾಜದ ತಾಲೂಕ ಅಧ್ಯಕ್ಷ ಮಹೇಶ್ ಗುತ್ತೇದಾರ, ಹೊಳಕುಂದ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಯುವ ಘಟಕದ ಅಧ್ಯಕ್ಷ ಅಖಿಲೇಶ್ ಗುತ್ತೇದಾರ, ಚಿಂತಕ ಬಿ.ಎಮ್ ರಾವೂರ್ ಉಪಸ್ಥಿತರಿದ್ದರು.

