ಒಳಮೀಸಲಾತಿ ಜಾರಿಗೆ ಕಾಂಗ್ರೆಸ್ ಸರಕಾರ ಕಾಲಹರಣ: ದೀಪಕ್ ಹೊಸ್ಸುರಕರ್ ಅಸಮಾಧಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಒಳಮೀಸಲಾತಿಗೆ ಸಂಬಂಧಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಗುರುವಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಧ್ಯಂತರ ವರದಿಯನ್ನು ಸಲ್ಲಿಸಿ, ವರದಿಯಲ್ಲಿ ಒಳಮೀಸಲಾತಿಯ ವರ್ಗೀಕರಣದ ಕುರಿತಾಗಿ ಹೇಳಿಲ್ಲ, ಬದಲಾಗಿ ಆದಿ ಕರ್ನಾಟಕ (ಎ.ಕೆ ) ಆದಿ ದ್ರಾವಿಡ (ಎ.ಡಿ ) ಜಾತಿಗಳಲ್ಲಿ ಗೊಂದಲವಿರುವುದರಿಂದ ಮತ್ತೊಂದು ಸಮೀಕ್ಷೆ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸಮೀಕ್ಷೆಯ ವಿವರಗಳು ಮತ್ತು ನಿರ್ವಹಣೆ ಮಾಡಲು ಸಮಿತಿ ರಚಿಸಬೇಕೆಂದು ಆಯೋಗ ಹೇಳುವ ಮೂಲಕ ಗೊಂದಲದ ಗೂಡಾಗಿ ಪರಿಣಮಿಸಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್ ಕಾಂಗ್ರೆಸ್ ಸರಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಗಸ್ಟ್ 1 ರಂದು ಸುಪ್ರೀಂಕೋರ್ಟ್ ತೀರ್ಪು ಬಂದಿದ್ದು, ಒಳಮೀಸಲಾತಿ ಜಾರಿ ಮಾಡುವ ಆಧಿಕಾರ ರಾಜ್ಯಗಳಿಗೆ ದಕ್ಕಿದ ತರುವಾಯ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ. ಹರಿಯಾಣದ ಬಿಜೆಪಿ ಸರ್ಕಾರ ತೀರ್ಪು ಬಂದ ಒಂದು ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡಿತು. ತೆಲಂಗಾಣದ ಕಾಂಗ್ರೆಸ್ ಸರ್ಕಾರ, ಆಂಧ್ರಪ್ರದೇಶದ ತೆಲಗುದೇಶಂ ಸರ್ಕಾರಗಳು ಒಳಮೀಸಲಾತಿ ಜಾರಿ ಮಾಡಲು ಆದೇಶ ಮಾಡಿವೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೆಪ ಹುಡುಕುತ್ತಾ ಮೀನಾಮೇಷ ಎಣಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ
ಆಯೋಗ ಮಾಡುವುದಾಗಿ ಹೇಳಿ ಸತತ 3 ತಿಂಗಳು ಸರ್ಕಾರ ವ್ಯಯ ಮಾಡಿತು. ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಲು ಮತ್ತೆ ಎರಡು ತಿಂಗಳಾಯಿತು. ಆಯೋಗ ರಚಿಸಬೇಕೆನ್ನುವುದು ಮಾದಿಗರ ಬೇಡಿಕೆಯಾಗಿತ್ತೆ ? ಮಾದಿಗರ ಯಾವ ಪ್ರಮುಖರೂ, ಯಾವ ಸಂಘಟನೆಗಳೂ ಆಯೋಗ ರಚನೆಯ ಬೇಡಿಕೆ ಇಟ್ಟಿರಲಿಲ್ಲ. ಕಳೆದ 30 ವರ್ಷದಿಂದ ಒಳ ಮೀಸಲಾತಿ ಹೋರಾಟವನ್ನು ವಿರೋಧಿಸುತ್ತಿದ್ದ ಶಕ್ತಿಗಳೇ ಸರ್ಕಾರದ ಮೇಲೆ ಒತ್ತಡ ಹೇರಿ ಆಯೋಗ ರಚನೆ ಮಾಡಿಸಿದವು. ಈಗ ಸರ್ಕಾರದ ಮುಂದೆ ಹೊಸ ಸಮೀಕ್ಷೆ ಆಗಬೇಕೆಂಬ ಬೇಡಿಕೆ ಬಂದಿದೆ. ಇದು ಕಾಲಹರಣ ಮಾಡುವ ತಂತ್ರವಾಗಿದೆ. ಸರ್ಕಾರದ ಈ ನಿಧಾನ ದ್ರೋಹವನ್ನು ಮಾದಿಗ ಸಮಾಜ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.
ಮಧ್ಯಂತರ ವರದಿಯಲ್ಲಿ ಮಾದಿಗ ಸಮಾಜದ ಶೇ 6 ರ ಪ್ರತ್ಯೇಕ ಮೀಸಲಾತಿ ಜಾರಿ ಮಾಡಿ ಮತ್ತೆ ಸಮೀಕ್ಷೆ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು ಆದರೆ ಆಯೋಗ ವರ್ಗೀಕರಣದ ವಿಷಯ ಬದಿಗಿಟ್ಟು, ಹಸಿದು ಕಂಗಾಲಾಗಿರುವ ಮಾದಿಗ ಸಮಾಜಕ್ಕೆ ಮಾತ್ತೊಂದು ಸಮೀಕ್ಷೆಯ ಶಿಫಾರಸ್ಸು ಮಾಡಿರುವುದು ಆನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಒಳ ಮೀಸಲಾತಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಚಿತ್ರದುರ್ಗದ ಸಮಾವೇಶದಲ್ಲಿಯೂ ಇದೇ ಘೋಷಣೆ ಮಾಡಿತ್ತು. ಈಗ ಎರಡು ವರ್ಷವಾದರೂ ಗಟ್ಟಿಯಾದ ಒಂದು ಹೆಜ್ಜೆ ಇಡಲಾಗದೆ ಕಾಂಗ್ರೆಸ್ ಸರ್ಕಾರ ನಿಂತಲ್ಲೇ ತೆವಳುತ್ತಿದೆ, ಸರ್ಕಾರದ ಈ ನೆಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಸರ್ಕಾರ ತನ್ನ ನೆಡೆಯನ್ನು ಸರಿಪಡಿಸಿಕೊಳ್ಳಲಿ. ಮಾದಿಗರ ಪಾಲಿನ ಶೇ 6 ರ ಪ್ರತ್ಯೇಕ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಲಿ, ಎಲ್ಲಾ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿರುವ ಮಾಧುಸ್ವಾಮಿ ವರದಿಯನ್ನು ಜಾರಿಮಾಡಲಿ ಅಥವಾ ಸದಾಶಿವ ಆಯೋಗದ ದತ್ತಾಂಶ ಬಳಸಿ ಹೊಸ ಆದೇಶ ಮಾಡಲಿ. ಇದ್ಯಾವುದನ್ನು ಮಾಡದೇ ಕೇವಲ ಸಮೀಕ್ಷೆ ಮಾಡುವ ಯೋಜನೆಯ ಹಿಂದೆ ಕಾಲಾಹರಣದ ಉದ್ದೇಶ ಬಿಟ್ಟರೆ ಬೇರೇನಿಲ್ಲ.
ಒಳಮೀಸಲಾತಿಯ ಬಗ್ಗೆ ಸರ್ಕಾರ ಬದ್ಧತೆ ತೋರಿಸಬೇಕು ಎಂಬುದು ನಮ್ಮ ಒಕ್ಕೊರಲಿನ ಆಗ್ರಹವಾಗಿದೆ ಎಂದು ಪತ್ರಿಕೆ ಹೇಳಿಕೆ ಮೂಲಕ ತಿಳಿಸಿದ್ದಾರೆ.