ಚಿತ್ತಾಪುರ ಮಾತೋಶ್ರೀ ಶಾಲೆಯ 14ನೇ ವಾರ್ಷಿಕೋತ್ಸವ, ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಎಲ್ಲರ ಸಹಕಾರ ಮುಖ್ಯ: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಪಾಲಕ ಪೋಷಕರ ಜೊತೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಗೊಲ್ಲಾಳೇಶ್ವರ ವಿದ್ಯಾಭಿವೃದ್ಧಿ ಶಿಕ್ಷಣ ಸಂಸ್ಥೆ ಸಂಚಾಲಿತ ಮಾತೋಶ್ರೀ ಮಹಾದೇವಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 14ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ಮುನ್ನೆಡೆಸುವುದು ಸರಳ ಕೆಲಸವಲ್ಲ ತುಂಬಾ ಕಷ್ಠದ ಕೆಲಸವಾಗಿದ್ದು ಇದಕ್ಕೆ ಎಲ್ಲರೂ ಸಹಕಾರ ಮಾಡಬೇಕು ಎಂದು ಹೇಳಿದರು. ಮಕ್ಕಳ ಬೆಳವಣಿಗೆಯಲ್ಲಿ ಪ್ರಾಥಮಿಕ ಶಿಕ್ಷಣ ಪ್ರಮುಖ ಹಂತವಾಗಿದೆ ಹೀಗಾಗಿ ಪಾಲಕರು ಹೆಚ್ಚು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಾತೋಶ್ರೀ ಶಾಲೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದು ಈ ಭಾಗದಲ್ಲಿ ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಶಿವಾನಂದ ನಾಲವಾರ ಮಾತನಾಡಿ, ಪ್ರತಿಭೆ ಎನ್ನುವುದು ಬಡತನದಲ್ಲಿಯೇ ಹುಟ್ಟುತ್ತದೆ ಹೀಗಾಗಿ ನಾವು ಬಡವರು ಎಂಬ ಕೀಳರಿಮೆ ತೆಗೆದುಹಾಕಿ, ಎಷ್ಟೇ ಬಡತನ ಇದ್ದರೂ ಮಕ್ಕಳಿಗೆ ಮಾತ್ರ ಶಿಕ್ಷಣ ಕೊಡಿಸುವುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು. ಪ್ರಾಥಮಿಕ ಶಿಕ್ಷಣ ಮೂಲ ಬುನಾದಿಯಾಗಿದೆ ಹೀಗಾಗಿ ಪಾಲಕರು ಪ್ರಾರಂಭದಲ್ಲಿಯೇ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಈ ಭಾಗದಲ್ಲಿ ಶಿಕ್ಷಣ ನೀಡುವ ಎಕೈಕ ಉದ್ದೇಶದಿಂದ ಶಾಲೆಯನ್ನು ನಡೆಸಲಾಗುತ್ತಿದೆ, ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಠದ ಕೆಲಸವಾಗಿದ್ದು ಇದಕ್ಕೆ ಪಾಲಕ ಪೋಷಕರ ಹಾಗೂ ಸುತ್ತಲಿನ ಸಾರ್ವಜನಿಕ ಸಹಕಾರ ತುಂಬಾ ಅವಶ್ಯಕತೆ ಇದೆ ಎಂದು ಹೇಳಿದರು.
ಸಾಹೇಬ ಮೈಹಿಬೂಬ ಅಲಿ ಶಾಹ ಕಲಿಫಾ, ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಮಾಜಿ ಸದಸ್ಯ ವಿಶ್ವನಾಥ ಕಾಶಿ, ಖಣಿ ಉದ್ಯಮಿ ನಾಗೇಂದ್ರ ರಾವೂರಕರ್, ಕಾಂಗ್ರೆಸ್ ಮುಖಂಡ ನಾಗಪ್ಪ ಕಲ್ಲಕ್ ವೇದಿಕೆಯಲ್ಲಿದ್ದರು. ಶಿಕ್ಷಕರಾದ ಫೈಮುದಾ ಬೇಗಂ, ಶ್ರೀದೇವಿ, ಸಂಗೀತಾ, ಶೇಷಪ್ಪ ಬಡಿಗೇರ್, ಜಯಶ್ರೀ ಸೇರಿದಂತೆ ಪಾಲಕ ಪೋಷಕರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಗದೇವ ಕುಂಬಾರ ಶಾಲಾ ವರದಿ ವಾಚಿಸಿದರು, ಶಿಕ್ಷಕ ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು, ಶಿಕ್ಷಕ ವಿಶ್ವನಾಥ ಮಡಿವಾಳ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

