Oplus_131072

ಶಹಾಬಾದ ಒಳ ಮೀಸಲಾತಿ ಜಾತಿ ಸಮೀಕ್ಷೆ, ಮಾದಿಗ ಎಂದು ನಮೂದಿಸಿ: ವಿಕ್ರಮ ಮೂಲಿಮನಿ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಒಳ ಮೀಸಲಾತಿ ಜಾತಿ ಸಮೀಕ್ಷೆ ವೇಳೆ ಮಾದಿಗ ಸಮುದಾಯದ ಎಲ್ಲರೂ ಜಾತಿ ಕಾಲಂನಲ್ಲಿ ಮಾದಿಗ ಎಂದು ಪೆನ್ ನಿಂದ ಬರೆಸಬೇಕು, ಆದಿ ಕರ್ನಾಟಕ ಅಥವಾ ಆದಿ ದ್ರಾವಿಡ ಎಂದು ಬರೆಸಬಾರದು ಎಂದು ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ವಿಕ್ರಮಪ್ರಸಾದ ಮೂಲಿಮನಿ ಕರೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಂಗಡಣೆಗಾಗಿ ಏ.5ರಂದು ನಡೆಯಲಿರುವ ಪರಿಶಿಷ್ಟ ಜಾತಿಯ ಜನಗಣತಿ ವೇಳೆ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರು ಉಪಜಾತಿ ಕಾಲಂನಲ್ಲಿ ‘ಮಾದಿಗ’ ಎಂದು ನಮೂದಿಸುವಂತೆ ಮನವಿ ಮಾಡಿದರು.

ಕಳೆದ 30 ವರ್ಷಗಳಿಂದ ಒಳ ಮೀಸಲಾತಿ ವಿಂಗಡಣೆಗಾಗಿ ಸಮುದಾಯದ ರಾಷ್ಟ್ರ, ರಾಜ್ಯ ನಾಯಕರ ಹೋರಾಟ ಫಲವಾಗಿ ಇತ್ತೀಚಿಗೆ ಪರಿಶಿಷ್ಟ ಜಾತಿಯಲ್ಲಿ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ.ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಆಯೋಗದ ಶಿಫಾರಸ್ಸಿನಂತೆ ಏ.5ರಿಂದ ರಾಜ್ಯಾದಂತ ಪರಿಶಿಷ್ಟ ಸಮುದಾಯದ 101 ಜಾತಿಯ ಜನಾಂಗವಾರು ಅಂಕಿ-ಅಂಶಗಳ ಸಂಗ್ರಹಣೆಗೆ ಚಾಲನೆ ದೊರೆಯಲಿದೆ, ಗಣತಿಗೆ ಬರುವ ಸ್ಥಳೀಯ ಅಧಿಕಾರಿಗಳು ಪರಿಶಿಷ್ಟ ಸಮುದಾಯದ ಎಲ್ಲ ಜಾತಿಗಳ ಸಮೀಕ್ಷೆ ವರದಿಯನ್ನು ಕ್ರೋಢಿಕರಣ ಮಾಡಲಿದ್ದು, ಗಣತಿಗೆ ಬರುವ ಅಧಿಕಾರಿಗಳಿಗೆ ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ, ಚಮ್ಮಾರ, ಆದಿ ಜಾಂಬವ ಎಂದು ಈಗಾಗಲೇ ಧೃಡೀಕರಣ ಪಡೆದಿರುವ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಜನರು ಪರಿಶಿಷ್ಟ ಜಾತಿಯ ಉಪ ಜಾತಿಯ ಕಾಲಂ ನಲ್ಲಿ ‘ಮಾದಿಗ’ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ನಡೆಸಿದ ಜಾತಿ ಗಣತಿಗಳಲ್ಲಿ ಹೊಲೆಯ, ಮಾದಿಗ ಜನಾಂಗದವರನ್ನು ರಾಜ್ಯದ ಒಂದೊಂದು ಭಾಗ, ಪ್ರಾಂತ್ಯದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ನಮೂದಿಸಿದ್ದಾರೆ. ಆದರೆ, ಇವು ಎರಡೂ ಜಾತಿಗಳಲ್ಲ, ಈ ರೀತಿಯ ಗೊಂದಲಗಳು 1931ರ ಜನಗಣತಿಯಿಂದ 2011ರ ಗಣತಿವರೆಗೂ ಮುಂದುವರೆದಿದೆ. ಆದ್ದರಿಂದ ಸರಿಯಾದ ಜಾತಿ ನಮೂದಿಸುವ ಮೂಲಕ ಈ ಗೊಂದಲಕ್ಕೆ ತೆರೆ ಎಳೆಯಬೇಕಾಗಿದೆ ಎಂದರು.

ಮಧ್ಯಂತರ ವರದಿಯ ಶಿಫಾರಸಿನಂತೆ ತಂತ್ರಜ್ಞಾನ ಬಳಸಿ ಮುಂದಿನ 60 (2 ತಿಂಗಳು) ದಿನಗಳೊಳಗೆ ಉಪ ಜಾತಿಗಳ ಸಮೀಕ್ಷೆ ನಡೆಸುವುದು, ಅದರ ಹೊಣೆಯನ್ನು ಹಾಲಿ ಇರುವ ಆಯೋಗಕ್ಕೆ ವಹಿಸಲಾಗಿದೆ.

ಅದಕ್ಕಾಗಿ ತಾಲೂಕು ಮಾದಿಗ ಸಮಾಜದ ವತಿಯಿಂದ ಪದಾಧಿಕಾರಿಗಳು ಸೇರಿಕೊಂಡು ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಮತ್ತು ಪ್ರತಿಯೊಬ್ಬ ಮಾದಿಗ ಸಮಾಜದ ಮನೆ, ಮನೆಗೆ ತೆರಳಿ ಜಾತಿಗಳ ಸಮೀಕ್ಷೆಯ ಬಗ್ಗೆ ಮತ್ತು ಜಾತಿಯ ಕಲಂ ನಲ್ಲಿ ಕೇವಲ ಪೆನ್ ನಲ್ಲಿ ಮಾದಿಗ ಎಂದು ಬರೆಯಿಸಿ ನಮೂದಿಸಬೇಕು ಎಂದು ಜಾಗೃತಿ ಮೂಡಿಸಲಾಗುವದು ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಮೋದ ಮಲ್ಹಾರ, ರವಿ ಬೆಳಮಗಿ, ನಾರಾಯಣ ಕಂದಕೂರ, ಜಗದೀಶ ಹುಲಿ ಯಲ್ಲಾಲಿಂಗ ಹೈಯಾಳಕರ, ರಮೇಶ ಬೇರಿ, ಶಿವಕುಮಾರ ಮೇತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!