ಚಿತ್ತಾಪುರ ತಾಲೂಕಿನ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.2 ರಂದು ಪ್ರತಿಭಟನೆ ಮೆರವಣಿಗೆ | ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಲು ರೈತ ಸಂಘ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಬರಗಾಲವೆಂದು ಘೋಷಣೆ ಮಾಡಬೇಕು, ಬೆಳೆ ವಿಮೆ ಹಣ ಮಂಜೂರು ಮಾಡಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕಗಳಲ್ಲಿನ ರೈತರ ಬೆಳೆ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆಯ ನೇತೃತ್ವದಲ್ಲಿ ಸೆಪ್ಟೆಂಬರ್ 2 ರಂದು ಬೆಳಗ್ಗೆ 11.30ರಿಂದ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಲಾಡ್ಜಿಂಗ್ ಕ್ರಾಸವರೆಗೆ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡಿದ್ದು, ಖುದ್ದಾಗಿ ಜಿಲ್ಲಾಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ಮನವಿ ಪತ್ರ ಪಡೆದುಕೊಳ್ಳುವ ತನಕ ಸತ್ಯಾಗ್ರಹ ಮಾಡಲಾಗುವುದು ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಎಂದು ತಾಲೂಕು ಅಧ್ಯಕ್ಷ ಶಾಮರಾಯ ಸಂಗಾವಿ ಮನವಿ ಮಾಡಿದ್ದಾರೆ.
ತಾಲೂಕಿನ ಎಲ್ಲಾ ಗ್ರಾಮೀಣ ರೈತರು ಬೆಳೆ ಇನ್ಸೂರೆನ್ಸ್ ಮಾಡಿಸಿರುತ್ತಾರೆ. ಆದರೆ ಬೆರಳಣಿಕೆ ಗ್ರಾಮಗಳಿಗೆ ಮಾತ್ರ ಬೆಳೆ ವಿಮೆ ಹಣ ಮಂಜೂರಿಯಾಗಿರುತ್ತದೆ. ಹಲವು ಗ್ರಾಮೀಣ ರೈತರಿಗೆ ಬೆಳೆ ಇನ್ಸೂರೆನ್ಸ್ ಹಣ ಮಂಜೂರಾತಿಯಾಗಿರುವುದಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿಮೆಂಟ್ ಕಾರ್ಖಾನೆಗಳಿಂದ ಬರುವ ಡಸ್ಟನ್ನು ಹೊರ ಹೋಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಕಂಪನಿಯವರಿಗೆ ಆದೇಶ ಮಾಡಬೇಕು, ಸಿಮೆಂಟ್ ಕಂಪನಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಕಂಪನಿಯ ಸಿ.ಎಸ್.ಆರ್.ಫಂಡನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಕಂಪನಿಯವರಿಗೆ ಆದೇಶ ಮಾಡಬೇಕು, ಸಿಮೆಂಟ್ ಕಂಪನಿಗಳಲ್ಲಿ ಸ್ಥಳೀಯ ಸಾರ್ವಜನಿಕರಿಗೆ ಕೆಲಸಕ್ಕಾಗಿ ಮೊದಲು ಆದ್ಯತೆ ಮೇಲೆ ನೇಮಕ ಮಾಡಿಕೊಳ್ಳಲು ಆದೇಶ ಮಾಡಬೇಕು ಎಂದು ಸಂಘದ ಪದಾಧಿಕಾರಿಗಳಾದ ಅರ್ಜುನ.ಎಂ.ಸಾಲಹಳ್ಳಿ ಭಂಕಲಗಿ, ಐಲರೆಡ್ಡಿ ಪಾಟೀಲ ಯರಗಲ್, ನಾಗರಾಜ ಹೂಗಾರ, ಬಸವರಾಜ.ಎಸ್.ಬಿರಾದಾರ ಅವರು ಒತ್ತಾಯಿಸಿದ್ದಾರೆ.

