ರಾವೂರನಲ್ಲಿ ಕನಕದಾಸರ ಜಯಂತಿ ಆಚರಣೆ, ಕನಕದಾಸರನ್ನ ಒಂದು ಕುಲಕ್ಕೆ ಸೀಮಿತಗೊಳಿಸುವ ಪ್ರಯತ್ನ ಆಗಬಾರದು: ಸಿದ್ದಲಿಂಗ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕನಕದಾಸರು ಜಾತಿ, ಮತ, ಪoಥಗಳನ್ನು ಮೀರಿ ಬೆಳೆದವರು ಇಂತಹ ದಾಸರನ್ನು ಇಂದು ಜಾತಿ, ಮತಕ್ಕೆ ಸೀಮಿತಗೊಳಿಸುವ ಪ್ರಯತ್ನ ಆಗಬಾರದು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಜಾತಿಯತೆಯನ್ನು, ಮೇಲು ಕೀಳು ಭಾವನೆಯನ್ನು, ಸಾಮಾಜಿಕ ತಾರತಮ್ಯವನ್ನು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿ ಸುಧಾರಿಸುವ ಕಾರ್ಯವನ್ನು ಕನಕದಾಸರು ಮಾಡಿದರು ಎಂದು ಹೇಳಿದರು.
15-16ನೇ ಶತಮಾನದಲ್ಲಿ ಭಕ್ತಿ ಪಂಥದ ಹರಿಕಾರರಾಗಿ ಕನ್ನಡ ಭಾಷೆಯಲ್ಲಿ ಕೀರ್ತನೆ, ಉಗಾಭೋಗಗಳನ್ನು ರಚಿಸಿ ಹಾಡುವುದರ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಕನಕದಾಸರು ಎಂದರು
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ, ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ, ದಾಸ ಸಾಹಿತ್ಯವಿಲ್ಲದ ಕನ್ನಡ ಸಾಹಿತ್ಯ ಅಪೂರ್ಣ. ಆದ್ದರಿಂದ ಪ್ರತಿಯೊಬ್ಬರೂ ಕನಕದಾಸರ ಜೀವನವನ್ನು ಓದಿ ಅವರು ಬರೆದ ಸಾಹಿತ್ಯವನ್ನು ಅಧ್ಯಯನ ಮಾಡಿ ಆ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರೂ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಡಾ. ಗುಂಡಣ್ಣ ಬಾಳಿ, ಅಣ್ಣಾರಾವ ಬಾಳಿ, ಮಲ್ಲಿನಾಥ ತುಮಕೂರ, ಶಿವಶರಣಪ್ಪ ಕೊಳ್ಳಿ, ಸಾಹೇಬಗೌಡ ತುಮಕೂರ, ಅಶೋಕ ವಗ್ಗರ, ಸಂಗಮೇಶ್ ಪೂಜಾರಿ, ನಿಂಗಣ್ಣ ಕೊಳ್ಳಿ, ಭೀಮು ಮದಗುಣಕಿ, ಮಹೇಶ ಬಾಳಿ, ಚಂದ್ರು ಕೊಳ್ಳಿ, ಶಿವು ಕಂಠಿಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.