ರಾವೂರನಲ್ಲಿ ಶ್ರೀ ಮಹಾದೇವ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ, ಶಾಲೆಯ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯ ಮಾದರಿ: ಸಿದ್ದಲಿಂಗ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಖುಷಿಯ ಸಂಗತಿಗಳನ್ನು ಮೋಜು ಮಸ್ತಿಗಳ ಮೂಲಕ ಹಣ ಪೋಲು ಮಾಡುವ ಜನಗಳ ಮದ್ಯೆ ತಾನು ಕಲಿತಿರುವ ಶಾಲೆಯ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ಸಿಹಿಯೂಟ ಹಾಕಿಸುವ ಮೂಲಕ ತಮ್ಮ ಟ್ರಸ್ಟ್ ಉದ್ಘಾಟನೆ ಮಾಡುತ್ತಿರುವ ಮುದಕಣ್ಣ ಅವರ ನಿರ್ಧಾರ ಎಲ್ಲರಿಗೂ ಮಾದರಿಯಾದದ್ದು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾದೇವ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂತವರ ಸಂಖ್ಯೆ ಹೆಚ್ಚಾಗಬೇಕು. ಸಂಪತ್ತಿರುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಿದೆ ಆದರೆ ಅವರ ಸಂಪತ್ತಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವವರ ಸಂಖ್ಯೆ ವಿರಳವಾಗಿದೆ. ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎನ್ನುವ ಸರ್ವಜ್ಞನ ಮಾತಿನಂತೆ ನಾವು ಜೀವನದಲ್ಲಿ ದಾನ ಮಾಡಿದಷ್ಟು. ಭಗವಂತ ಇನ್ನೊಂದು ರೂಪದಲ್ಲಿ ನಮಗೆ ಕೊಡುತ್ತಿರುತ್ತಾನೆ. ಆದ್ದರಿಂದ ನಾವು ಕೊಡುವುದನ್ನು ಕಲಿಯಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ದತ್ತಾತ್ರೇಯ ಮುದಕಣ್ಣ. ನಮ್ಮನ್ನು ಅಗಲಿದ ನಮ್ಮ ತಂದೆಯವರ ಹೆಸರಿನಲ್ಲಿ ನಾವು ಪ್ರಾರಂಭಿಸುತ್ತಿರುವ ಮಹಾದೇವ ಟ್ರಸ್ಟ್ ನ್ನು ನಾನು ಕಲಿತ ಶಾಲೆಯಿಂದಲೇ ಪ್ರಾರಂಭಿಸಬೇಕೆಂಬ ಆಸೆ ಇಂದು ಪೂಜ್ಯರ ಅಪ್ಪಣೆಯಿಂದ ಈಡೇರಿದೆ. ಈ ಟ್ರಸ್ಟ್ ಮೂಲಕ ಕೈಲಾದಷ್ಟು ಸಹಾಯವನ್ನು ಸಮಾಜ ಸೇವೆ ಮಾಡಲು ಬಯಸಿದ್ದೇವೆ. ಇಮ್ಮೆಲ್ಲರ ಸಹಕಾರ ಮುಖ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಸತಿ ನಿಲಯದ 130 ಮಕ್ಕಳಿಗೆ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು. ನಾದಬ್ರಹ್ಮ ಕಲಾ ತಂಡದ ವತಿಯಿಂದ ಕಲಾವಿದರಾದ ಸಂದೇಶ ಕಡಗಂಚಿ, ರಮೇಶ ಪಾಟೀಲ್, ಅನಿತಾ ಕುಮಸಗಿ, ಆನಂದ ಪಾಟೀಲ್ ಹಾಡುಗಳನ್ನು ಹಾಡುವುದರ ಮೂಲಕ ಮಕ್ಕಳನ್ನು, ಶಿಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಕಮಲಾಬಾಯಿ ಮುದಕಣ್ಣ, ನಾರಾಯಣ ಮುದಕಣ್ಣ, ಡಾ. ಮೇಘಾ, ವಿಜಯಕ್ಷ್ಮೀ ವೇದಿಕೆಯ ಮೇಲಿದ್ದರು. ಸಂಸ್ಥೆಯ ಸದಸ್ಯ ಸಿದ್ದಲಿಂಗ ಜ್ಯೋತಿ, ಪಾಚಾರ್ಯ ಕಾಂತಪ್ಪ ಬಡಿಗೇರ್ ಸೇರಿದಂತೆ ಶಿಕ್ಷಕರು, ಪಾಲಕರು ಇದ್ದರು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು.