ಸಂವಿಧಾನ ಮತ್ತು ಮಾಧ್ಯಮ ವಿಷಯ ಕುರಿತು ಉಪನ್ಯಾಸ, ಸಂವಿಧಾನದ ಓದು ಮತ್ತು ಅನುಸರಣೆ ಬಹಳ ಅಗತ್ಯ: ಸತ್ಯಂಪೇಟೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸಂವಿಧಾನದ ರಕ್ಷಣೆಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೇಲೆ ಸಾಕಷ್ಟು ಜವಾಬ್ದಾರಿಯಿದ್ದು, ಸಂವಿಧಾನದ ಓದು ಮತ್ತು ಅನುಸರಣೆ ಬಹಳ ಅಗತ್ಯ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅವರು ಪ್ರತಿಪಾದಿಸಿದರು.
ನಗರದ ಹೊರವಲಯದಲ್ಲಿರುವ ಪಂಚಾಯತ್ ರಾಜ್ ಇಲಾಖೆಯ ಅಬ್ದುಲ್ ನಜೀರ್ ಸಾಬ್ ತರಬೇತಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ 4ನೇ ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಸಂವಿಧಾನ ಮತ್ತು ಮಾಧ್ಯಮ ವಿಷಯ ಕುರಿತು ಉಪನ್ಯಾಸಕರಾಗಿ ಮಾತನಾಡಿದರು.
ಯಾವುದೋ ಭ್ರಮಾಲೋಕದಲ್ಲಿ ಮುಳುಗಿ ಗೊಂದಲದ ಗೂಡಾಗಿರುವ ಇಂದಿನ ಯುವಕರು ಸಂವಿಧಾದ ರಕ್ಷಣೆಗೆ ಮುಂದಾಗಬೇಕು. ಪ್ರಬಲ ಮಾಧ್ಯಮವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣ ನೆಚ್ಚಿಕೊಂಡಿರುವ ಯುವಕರಿಗೆ ಸಮಾಜ ಮುಖ್ಯವಾಗಬೇಕು ಎಂದು ಕರೆ ನೀಡಿದರು.
ಬಸವಣ್ಣನವರು ಕಳಬೇಡ, ಕೊಲಬೇಡ ಎಂಬ ವಚನದ ಮೂಲಕ ಸಾರ್ಥಕ ಬದುಕಿಗೆ ಸಪ್ತ ಸೂತ್ರಗಳನ್ನು ಹೇಳಿದರೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರತೀಯರ ಬದುಕಿಗೆ ಘನತೆ ತಂದು ಕೊಟ್ಟರು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ತರಬೇತಿ ಕೇಂದ್ರದ ಹಿರಿಯ ಕಾರ್ಯಕ್ರಮಾಧಿಕಾರಿ ನಾಗೇಶ ಹರಳಯ್ಯ ಮಾತನಾಡಿ, ಸಂವಿಧಾನವನ್ನು ಕೇವಲ ಶಾಸನವನ್ನಾಗಿ ನೋಡದೆ, ಸಂವಿಧಾನವನ್ನು ಮೌಲ್ಯವಾಗಿ ನೋಡಬೇಕು. ಈ ದಿಸೆಯಲ್ಲಿ ಶಿಕ್ಷಣ ಮತ್ತು ಸಂವಿಧಾನ, ಸಂವಿಧಾನ ಮತ್ತು ಲಿಂಗ ಸಮಾನತೆ, ಸಂವಿಧಾನ ಮತ್ತು ಮಾಧ್ಯಮ ಎಂಬಿತ್ಯಾದಿ ವಿಷಯಗಳ ಮೂಲಕ ಯುವಕರಲ್ಲಿ ಜಾಗ್ರತೆ ಮೂಡಿಸಲಾಗುತ್ತಿದೆ ಎಂದರು. ತರಬೇತಿ ಕೇಂದ್ರದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.