ಶಹಾಪುರ ತಾಪಂ ಮಾಜಿ ಸದಸ್ಯನ ಮೇಲೆ ಹಲ್ಲೆ | ನಗರಸಭೆ ಮಾಜಿ ಸದಸ್ಯನ ಬಂಧನ, ಆರು ಮಂದಿ ವಿರುದ್ಧ ಎಫ್ಐಆರ್
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಸಾಲದ ಬಡ್ಡಿ ಪಾವತಿ ಸಂಬಂಧ ತಾಲೂಕು ಪಂಚಾಯಿತಿ ಮಾಜಿ ಸದಸ್ಯರೊಬ್ಬರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ನಗರ ಸಭೆಯ ಮಾಜಿ ಸದಸ್ಯ ಸೇರಿ ಆರು ಮಂದಿ ವಿರುದ್ದ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಸೆ.28 ರಂದು ಪ್ರಕರಣ ದಾಖಲಾಗಿದೆ.
ಶಹಾಪುರ ತಾ.ಪಂ ಮಾಜಿ ಸದಸ್ಯ ಬಸವರಾಜ ರಾಠೋಡ ಅವರು ನೀಡಿದ ದೂರಿನ ಅನ್ವಯ ಯಾದಗಿರಿ ನಗರಸಭೆಯ ಮಾಜಿ ಸದಸ್ಯ ಶಂಕರ ರಾಠೋಡ ಬಂಧಿಸಲಾಗಿದ್ದು, ಸುನಿತಾ ರಾಠೋಡ, ಪ್ರಿಯಾದರ್ಶಿನಿ ರಾಠೋಡ, ಐಶ್ವರ್ಯಾ ರಾಠೋಡ, ಪೃಥ್ವಿರಾಜ್ ರಾಠೋಡ, ರಾಹುಲ್ ರಾಠೋಡ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವರಾಜ ಅವರು 2021ರಲ್ಲಿ ಶಂಕರ್ ಅವರ ಬಳಿ ₹ 5 ಲಕ್ಷ ಸಾಲ ಪಡೆದಿದ್ದರು. ಅಸಲು ಮತ್ತು ಬಡ್ಡಿ ಸಮೇತ ₹8.50 ಲಕ್ಷ ಸಾಲ ಮರು ಪಾವತಿ ಮಾಡಿದ್ದರೂ ಮೀಟರ್ ಬಡ್ಡಿಕೊಡುವಂತೆ ಬಲವಂತ ಮಾಡಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ನಾನು ಕಳೆದ ಅನೇಕ ವರ್ಷಗಳಿಂದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಒಂದು ಅವಧಿಗೆ ಶಹಾಪುರ ತಾಲೂಕು ಪಂಚಾಯತ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಜನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಈ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಸಹಿಸದ ಕೆಲವರು ಕಳೆದ ಸುಮಾರು ಒಂದೆರಡು ವರ್ಷಗಳಿಂದ ವಿನಾಕಾರಣವಾಗಿ ನನ್ನ ಮೇಲೆ ವೈಯಕ್ತಿಕ ದ್ವೇಷ ಬೆಳೆಸಿಕೊಂಡು, ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾನು ಅತ್ಯಂತ ಭಯ ಮತ್ತು ಆತಂಕದ ಪರಿಸ್ಥಿತಿಯಲ್ಲಿ ಈ ದೂರನ್ನು ಸಲ್ಲಿಸುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಮೇಲ್ಕಂಡ ವ್ಯಕ್ತಿಗಳು ನನ್ನಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಜೀವ ಬೆದರಿಕೆ ಹಾಕುವುದು, ಸಾರ್ವಜನಿಕವಾಗಿ ಅವಮಾನಿಸುವುದು ಹಾಗೂ ನನ್ನ ಮಾನ-ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಘಟನೆಯ ಹಿನ್ನೆಲೆ: ಸೆ. 28 ರಂದು ನಾನು ಬೆಂಗಳೂರಿನಿಂದ ಯಾದಗಿರಿಗೆ ಆಗಮಿಸಿ, ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲರ ನೇತೃತ್ವದಲ್ಲಿ ಮಧ್ಯಾಹ್ನ ಸುಮಾರು 12 ಗಂಟೆಗೆ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೆಲಸದ ನಿಮಿತ್ತ ಶಾಸಕರನ್ನು ಭೇಟಿ ಮಾಡಲು ಅವರ ಕಚೇರಿ/ಕಾರ್ಯಕ್ರಮದ ಸ್ಥಳಕ್ಕೆ ತೆರಳಿದ್ದೆನು. ಸಂಜೆ ಸುಮಾರು 4.30 ಗಂಟೆಗೆ ಶಂಕರ ರಾಠೋಡ, ಸುನಿತಾ ರಾಠೋಡ, ಪ್ರಿಯದರ್ಶಿನಿ ರಾಠೋಡ, ಐಶ್ವರ್ಯ ರಾಠೋಡ, ಪೃಥ್ವಿರಾಜ್ ರಾಠೋಡ, ರಾಹುಲ ಠಾಠೋಡ ಗಾಂಧಿನಗರ ತಾಂಡಾದ ಸುಮಾರು 8-10 ಮಂದಿ ಮಹಿಳೆಯರು ಮತ್ತು ಇತರ ಪುರುಷರ ಗುಂಪು ಒಟ್ಟಾಗಿ ಬಂದು ನನ್ನನ್ನು ಸುತ್ತುವರಿದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಳೆದಾಡಿ, ಹಲ್ಲೆ ನಡೆಸಿ, ಕೈಗಳಿಂದ ನನ್ನ ಗುಪ್ತಾಂಗ, ದೇಹದ ಸೂಕ್ಷ್ಮ ಭಾಗಗಳಿಗೆ ಮೊಣಕಾಲುಗಳಿಂದ ಗುದ್ದಿ ದೇಹದ ಸೂಕ್ಷ್ಮಭಾಗಗಳಿಗೆ ಹೊಡೆದು ಜೀವ ಹಾನಿ ಮಾಡಲು ಪ್ರಯತ್ನ ಮಾಡಿದ್ದು ಇರುತ್ತದೆ.
ಈ ಸಂದರ್ಭದಲ್ಲಿ ಶಂಕರ ರಾಠೋಡ್ ಅವರು ನನ್ನ ತಲೆಯ ಮೇಲೆ ಹೊಡೆದಿದ್ದಾರೆ. ಗುಂಪಿನ ಕೆಲವರು ನನ್ನನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸಕರ ಕಚೇರಿ/ಕಾರ್ಯಕ್ರಮದ ಸ್ಥಳದಲ್ಲಿದ್ದ ಪೊಲೀಸ್ ಮಧ್ಯ ಪ್ರವೇಶಿಸಿ ನನಗೆ ಹೊಡೆಯುವುದನ್ನು ಬಿಡಿಸಿಕೊಂಡು ನನ್ನ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಿರುತ್ತಾರೆ.
ಕಾರಣ ನಾನು ಅವರಿಂದ ಪಡೆದ 5 ಲಕ್ಷ ರೂಗಳಿಗೆ ಬಡ್ಡಿ ಹಣ ಸೇರಿಸಿ 8.50,000/- ರೂಗಳು ಪಾವತಿ ಮಾಡಿದ್ದರೂ ಸಹ ನನ್ನ ಮೇಲೆ ಹಲ್ಲೆ ಮಾಡಿ ದೇದಹ ಸೂಕ್ಷ್ಮ ಭಾಗಗಳಿಗೆ ಕೈಗಳಿಂದ ಗುದ್ದಿ, ಮೊಣಕಾಲುಗಳಿಂದ ಗುದ್ದಿ ಜೀವಕ್ಕೆ ಅಪಾಯವಾಗುವಂತೆ ಗುಪ್ತಗಾಯಪಡಿಸಿ, ಅವಾಚ್ಯವಾಗಿ ನಿಂದಿಸಿ ಜೀವದ ಬೆದರಿಕೆ ಹಾಕಿರುವ ಮೇಲ್ಕಂಡ ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಸವರಾಜ ರಾಠೋಡ ನೀಡಿದ ದೂರು ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 162/2026 ಕಲಂ 189(2), 115(2), 118(1), 110, 351(2), 352, ಸಂಗಡ 190 ಬಿಎನ್ಎಸ್ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪಿಎಸ್ಐ ತಿಳಿಸಿದ್ದಾರೆ.
