ಶ್ರೀ ಸಿಮೆಂಟ್ ಕಂಪೆನಿಯ ಕಾರ್ಮಿಕನ ಸಾವು ಸಮಗ್ರ ತನಿಖೆ ನಡೆಸಿ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಎಐಯುಟಿಯುಸಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಇತ್ತೀಚೆಗೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಶ್ರೀ ಸಿಮೆಂಟ್ ಹತ್ತಿರ ಬಿಹಾರ ಮೂಲದ ಚಂದನಸಿಂಗ್ (35) ಎಂಬ ಕಾರ್ಮಿಕನ ಸಾವು ಸಂಭವಿಸಿತ್ತು. ಸಿಮೆಂಟ್ ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯತನದಿಂದಾಗಿ ಮೃತ ದೇಹವನ್ನು ಎಳೆದುಕೊಂಡು ಹೋಗಿರುವುದು ಬಹಳ ದು:ಖದ ವಿಷಯವಾಗಿದೆ. ಈ ಅಮಾನವೀಯ ಕೃತ್ಯವನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಅಧ್ಯಕ್ಷ ವಿ.ಜಿ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಎಸ್.ಎಂ ಶರ್ಮಾ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಮಿಕರ ಜೀವನ ಇಂದು ಬಹಳ ಶೋಚನೀಯ ಪರಿಸ್ಥಿತಿ ತಲುಪಿದೆ. ದುಡಿತಕ್ಕೆ ತಕ್ಕ ವೇತನವಿಲ್ಲದೆ ಹೇಗೂ ಬದುಕನ್ನು ಸಾಗಿಸುತ್ತಿದ್ದಾರೆ. ಕಂಪನಿ ಮಾಲಿಕರ ಅಧಿಕ ಲಾಭದ ಆಸೆಯ ಜಾಲಕ್ಕೆ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಬೇರೆ ಬೇರೆ ರಾಜ್ಯಗಳಿಂದ ಕಾರ್ಮಿಕರು ವಲಸೆ ಬಂದು ದುಡಿಯುತ್ತಿದ್ದಾರೆ. ಬದುಕು ಹಾಗೂ ಸಾವು ಎರಡರಲ್ಲಿಯೂ ಕಾರ್ಮಿಕನು ಅನ್ಯಾಯಕ್ಕೆ ಒಳಗಾಗಿದ್ದಾನೆ. ತಕ್ಷಣವೇ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಈ ಕೃತ್ಯಕ್ಕೆ ಕಾರಣೀಭೂತರಾದವರನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.