ತಾಲೂಕು ವಿಪತ್ತು ನಿರ್ವಹಣ ಪ್ರಾಧಿಕಾರದ ಸಮಿತಿ ಸಭೆ, ಒವರ್ ಹೆಡ್ ಟ್ಯಾಂಕ್ ಸ್ವಚ್ಛತೆಗೆ ಎಸಿ ಪ್ರಭುರೆಡ್ಡಿ ಸೂಚನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ 22 ಗ್ರಾಮ ಪಂಚಾಯಿತಿಗಳ ಹಾಗೂ ಚಿತ್ತಾಪುರ, ವಾಡಿ ಪುರಸಭೆಗಳ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು ಸರಬರಾಜು ಮಾಡುವ ಒವರ್ ಹೆಡ್ ಟ್ಯಾಂಕ್ ಗಳನ್ನು ಸಚ್ಛತೆ ಮಾಡಬೇಕು ಎಂದು ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ವಿಪತ್ತು ನಿರ್ವಹಣ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಒವರ್ ಹೆಡ್ ಟ್ಯಾಂಕ್ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಸ್ವಚ್ಛತೆ ಮಾಡಿದ ದಿನಾಂಕ ನಮೂದಿಸಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕಿನಲ್ಲಿ ಮುಂಬರುವ ಬೇಸಿಗೆಯ ಸಮಯದಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮಗಳು ಕೈಗೊಳ್ಳಬೇಕು ಎಂದು ಹೇಳಿದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಚಿತ್ತಾಪುರ ತಾಲೂಕಿನ 2025-26ನೇ ಸಾಲಿನ ಮುಂಬರುವ ಬೇಸಿಗೆ ಸಮಯಗಳಲ್ಲಿ ಕುಡಿಯುವ ನೀರಿನ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಗಳ ಕುರಿತು ಹಾಗೂ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸೂಚಿಸಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳ ಪಟ್ಟಿ ಚಾಲ್ತಿಯಲ್ಲಿರುವ ಹಾಗೂ ಬಂದ್ ಇರುವ ಬೋರವೆಲ್, ತೆರೆದ ಬಾವಿಗಳು, ನದಿಯ ಮೂಲದ ಮಾಹಿತಿ ನಿಗದಿಪಡಿಸಿದ ಫಾರ್ಮ್ ದಲ್ಲಿ ಭರ್ತಿ ಮಾಡಿ ಇಂದೇ ಸಲ್ಲಿಸಬೇಕು ಎಂದು ಸೂಚಿಸಿದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಆರು ಸಭೆಗಳು ನಡೆಯಲಿದ್ದು, ಮಾರ್ಚ್ 15 ರೊಳಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಈ ವರ್ಷ ಸರ್ಕಾರ ಇನ್ನೂ ಬರಗಾಲ ಘೋಷಣೆ ಮಾಡಿಲ್ಲ ಹೀಗಾಗಿ ಕುಡಿಯುವ ನೀರಿನ ಸಂಪನ್ಮೂಲಗಳು ಬಳಕೆ ಮಾಡಿಕೊಳ್ಳಬೇಕು. ಬೋರವೆಲ್ ಹಾಗೂ ತೆರೆದ ಬಾವಿಗಳು ಕೊರತೆ ಇದ್ದಾಗ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕುಡಿಯುವುದಕ್ಕೆ ನೀರು ಯೋಗ್ಯ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ನಂತರವೇ ನೀರು ಪೂರೈಕೆ ಮಾಡಿ ಈ ಸಂದರ್ಭದಲ್ಲಿ ಎನಾದರೂ ಅನಾಹುತ ಆದರೆ ಅದಕ್ಕೆ ತಾವೇ ಹೊಣೆಗಾರರಾಗುತ್ತಿರಿ ಎಂದು ಎಚ್ಚರಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಎಡಿ ಶ್ರೀಮಂತ ಸಂಗಾವಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಾನಿರ್ವಾಹಕ ಅಭಿಯಂತರರು ರಾಜಕುಮಾರ್ ಅಕ್ಕಿ, ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಶಿರಸ್ತೇದಾರ್ ಅಶ್ವಥ್ ನಾರಾಯಣ, ನಾಲವಾರ, ಗುಂಡಗುರ್ತಿ ಉಪ ತಹಸೀಲ್ದಾರರು, ಎಲ್ಲಾ ಕಂದಾಯ ನೀರಿಕ್ಷಕರು, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.