ತಿಪ್ಪಣ್ಣಪ್ಪ ಕಮಕನೂರ ಅವರನ್ನು ಪೂರ್ಣಾವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕಕ್ಕೆ ಅತಿ ಹಿಂದುಳಿದ ಸ್ವಾಮೀಜಿಗಳ ನಿಯೋಗ ಖರ್ಗೆ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಹಿಂದುಳಿದ ಸಮಾಜದ ನಾಯಕರಾದ ತಿಪ್ಪಣ್ಣಪ್ಪ ಕಮಕನೂರು ಅವರನ್ನು ಪೂರ್ಣಾವಧಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮುಂದುವರಿಸಲು ಈ ಬಾರಿ ಅವಕಾಶ ನೀಡಬೇಕೆಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷ ಡಾ. ಪ್ರಣವಾನಂದ ಮಹಾಸ್ವಾಮಿಗಳ ನೇತೃತ್ವದ ನಿಯೋಗವು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
ನವದೆಹಲಿಯಲ್ಲಿ ಬುಧವಾರ (ಮೇ 27ರಂದು) ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ಅತಿ ಹಿಂದುಳಿದ ಮಠಾಧೀಶರು ಭೇಟಿ ಮಾಡಿ 2019ರಲ್ಲಿ ತಿಪ್ಪಣ್ಣಪ್ಪ ಕಮಕನೂರು ಒಂದು ವರ್ಷದ ಅವಧಿಗೆ ಮಾತ್ರ ವಿಧಾನ ಪರಿಷತ್ ಸದಸ್ಯರಾಗಿದ್ದರು. ನಂತರ 2023ರಲ್ಲಿ ಮೂರು ವರ್ಷದ ಅವಧಿಗೆ ವಿಧಾನ ಪರಿಷತ್ ಸದಸ್ಯರಿದ್ದರು. ಅವರ ಅವಧಿ ಇದೇ ಜೂನ್ 30ಕ್ಕೆ ಪೂರ್ಣಗೊಳ್ಳಲಿದೆ. ಕಮಕನೂರು ಗಂಗಾಮತಸ್ಥರಾದರೂ ಹಿಂದುಳಿದ ಸಮಾಜದವರ ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ಮತ್ತು ಧಾರ್ಮಿಕ ಅಭಿವೃದ್ಧಿಗಾಗಿ ಶ್ರಮಿಸಿದ ಒಬ್ಬ ನಿಷ್ಠಾವಂತ ನಾಯಕರು, ಅನೇಕ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸಮರ್ಥವಾಗಿ ಗಮನ ಸೆಳೆದು ಪರಿಹಾರಕ್ಕೆ ಪ್ರಯತ್ನಿಸಿ, ಅಭಿವೃದ್ಧಿಗೆ ಶ್ರಮಿಸಿದವರು. ಹಿಂದುಳಿದವರ ಮತ ಕ್ರೋಢೀಕರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದವರು ಎಂದು ನಿಯೋಗವು ಖರ್ಗೆಯವರಿಗೆ ಮನವರಿಕೆ ಮಾಡಿದೆ.
ಕಮಕನೂರ ಅವರನ್ನು ಪೂರ್ಣಾವಧಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮರು ಆಯ್ಕೆ ಮಾಡಬೇಕೆಂದು ನವದೆಹಲಿಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ ಖರ್ಗೆ ಅವರಿಗೂ ಕೂಡಾ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ. ಪ್ರಣವಾನಂದ ಸ್ವಾಮೀಜಿ, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ವಿಶ್ವಕರ್ಮ ಸಮಾಜದ ಶ್ರೀ ದೊಡ್ಡೆಂದ್ರ ಸ್ವಾಮೀಜಿ, ರಾಜ್ಯ ಉಪಾಧ್ಯಕ್ಷರಾದ ಕುಂಬಾರ ಸಮಾಜದ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲಂಬಾಣಿ ಸಮಾಜದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ರಾಜ್ಯ ಉಪಾಧ್ಯಕ್ಷರಾದ ಮಾದರ ಚೆನ್ನಯ್ಯ ಸಮಾಜದ ಮಹಾಂತ ಮಹಾಸ್ವಾಮೀಜಿ, ಡಾ.ವರಲಿಂಗೇಶ್ವರ ಮಹಾಸ್ವಾಮಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

